ಪೆರು -
ದಕ್ಷಿಣ ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಒಂದು ಗಣರಾಜ್ಯ. ಉತ್ತರದಲ್ಲಿ ಎಕ್ವೆಡಾರ್ ಮತ್ತು ಕೊಲಂಬಿಯ, ಪಶ್ಚಿಮದಲ್ಲಿ ಪೆಸಿಫಿಕ್ ಸಾಗರ, ಪೂರ್ವದಲ್ಲಿ ಬ್ರಜಿಲ್ ಮತ್ತು ಬೊಲಿವಿಯ. ದಕ್ಷಿಣದಲ್ಲಿ ಚಿಲಿ ಇದೆ. ಪೂರ್ವ ಪಶ್ಚಿಮವಾಗಿ 1408 ಕಿಮೀ, ಉತ್ತರ ದಕ್ಷಿಣವಾಗಿ 1971 ಕಿ.ಮೀ ಇರುವ ಇದರ ವಿಸ್ತೀರ್ಣ 1285216 ಚ.ಕಿ.ಮೀ. ಜನಸಂಖ್ಯೆ 26082,000 (2000), ರಾಜಧಾನಿ ಲೀಮಾ. 

ಭೌತಿಕ ಭೂವಿವರಣೆ -
	ಮೇಲ್ಮೈಯ ಲಕ್ಷಣ: ದೇಶದ ಬಹುಭಾಗವನ್ನು ಆಂಡೀಸ್ ಪರ್ವತಗಳು ಆವರಿಸಿಕೊಂಡಿವೆ. ಕಾರ್ಡಿಲೆರೆ ಓರಿಯೆಂಟಾಲ್ ಮತ್ತು ಕಾರ್ಡಿಲೆರೆ ಸೆಂಟ್ರಾಲ್ ಪ್ರಮುಖ ಶ್ರೇಣಿಗಳು. ಅತ್ಯಂತ ಎತ್ತರವಾದ ಶಿಖರ ವಾಸ್ಕರಾನ್(6,767 ಮೀ.)ನೆವಾಡೊ ಕಾರೊಪೂನ ಶಿಖರದ ಎತ್ತರ 6,424 ಮೀ.

	ಪೆರು ರಾಜ್ಯಕ್ಕೆ 2,330 ಕಿ.ಮೀ. ಉದ್ದದ ಸಮುದ್ರ ತೀರವಿದೆ. ಪೂರ್ವಭಾಗದ ಬೆಟ್ಟದ ತಪ್ಪಲುಗಳಲ್ಲಿ ಅಮೆಜಾನ್ ನದಿಯೂ ಆದರೆ, ಉಪನದಿಗಳೂ ಹರಿಯುವ ಬಯಲು ನೆಲ ಹಾಗೂ ಕಣಿವೆಗಳಿವೆ. ದೇಶದ ಈಶಾನ್ಯ ಭಾಗ ವಿಶಾಲವಾದ ಮೈದಾನವಾಗಿದೆ. 

	ಪೆರುವಿನಲ್ಲಿ ಮೂರು ವಿಭಾಗಗಳು ಎದ್ದು ಕಾಣುತ್ತವೆ; ಪೆಸಿಫಿಕ್ ತೀರದ ಕಿರಿದಾದ ಒಣಮರುಭೂಮಿ, ಕಡಿದಾದ ಆಂಡೀಸ್ ಶ್ರೇಣಿಗಳು, ಪೂರ್ವದ ಇಳಿಜಾರಿನ ತೇವವಾದ, ಅರಣ್ಯಾವೃತ ಪ್ರದೇಶ. ಭೌಗೋಳಿಕವಾಗಿ ಇದನ್ನು ಎಂಟು ಪ್ರದೇಶಗಳಾಗಿ ವಿಭಜಿಸಲಾಗಿದೆ. 

	1. ಕರಾವಳಿ ಬಯಲು : ಸಮುದ್ರದ ಅಂಚಿನಿಂದ ಸಮುದ್ರ ಮಟ್ಟಕ್ಕೆ 500 ಮೀ ಎತ್ತರದವರೆಗೆ ಇರುವ ಪ್ರದೇಶ. ಸಮುದ್ರ ತಂದು ಹಾಕಿದ ಹಾಗೂ ಪ್ರಾಚೀನ ಪರ್ವತಗಳ ಸವೆತದಿಂದ ಹರಡಿದ ಗಷ್ಟಿನಿಂದ ಈ ಪ್ರದೇಶ ನಿರ್ಮಿತವಾಗಿದೆ. ಇದು ಮರುಭೂಮಿ. ಸಹಾರಾ ಮರುಭೂಮಿಯಲ್ಲಿ ಆಗುವುದಕ್ಕಿಂತಲೂ ಇಲ್ಲಿ ಮಳೆ ಕಡಿಮೆ. ಆದರೂ ಇದು ಪೆರುವಿನ ಆರ್ಥಿಕ ಕೇಂದ್ರ. ಇದು ಜನನಿಬಿಡವಾದ ಪ್ರದೇಶ. ಹಲವು ದಶಕಗಳಿಗೊಮ್ಮೆ ಡಿಸೆಂಬರಿನಲ್ಲಿ ಇಲ್ಲಿ ವಿಪರೀತ ಮಳೆಯಾಗಿ ನೀರು ತುಂಬಿಕೊಂಡು ಇಲ್ಲಿಯ ಗಾಳಿ ಮಳೆ ಸಸ್ಯ ಪ್ರಾಣಿಗಳ ಸಮತೋಲದಲ್ಲಿ ಏರುಪೇರಾಗುವುದುಂಟು. ಆಗ ಮೀನುಗಳು ತೀರ ಸಮುದ್ರದಿಂದ ದೂರ ಸರಿಯುತ್ತವೆ. ಮೀನುಗಾರಿಕೆಗೆ ಧಕ್ಕೆ ಉಂಟಾಗುತ್ತದೆ. ಮೀನುಗಳು ಸಿಗದೆ ಹಕ್ಕಿಗಳು ಒಟ್ಟೊಟ್ಟಾಗಿ ಸಾಯುತ್ತವೆ. 

	2. ಸಮಶೀತೋಷ್ಣ ಪ್ರದೇಶ: ಸಮುದ್ರ ಮಟ್ಟದಿಂದ 2,300-3,500 ಮೀ. ನಡುವಣ ಪ್ರದೇಶ. ಇಲ್ಲಿ ನೆಲ ಅಲೆಯಲೆಯಾಗಿದೆ. ವಾಯುಗುಣ ಹಿತಕರವಾಗಿರುವುದರಿಂದ ಜನವಸತಿ ದಟ್ಟವಾಗಿದೆ. ಇಲ್ಲಿಯ ನೆಲ ಜ್ವಾಲಾಮುಖೀಯ ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಹಣ್ಣು ಮತ್ತು ತರಕಾರಿ ಬೆಳೆಗೆ ಪ್ರಶಸ್ತವಾಗಿದೆ. ಪ್ರಾಚೀನ ಇಂಕ ಸಾಮ್ರಾಜ್ಯದ ಪ್ರಮುಖ ಪಟ್ಟಣಗಳು ಇದ್ದುದು ಇಲ್ಲೆ. ಈಗ ಅವುಗಳಿದ್ದ ಸ್ಥಳಗಳಲ್ಲಿ ಅಥವಾ ಆ ಸ್ಥಳಗಳ ಬಳಿಯಲ್ಲಿ ಕೂಸ್ಕೊ, ಕಜಮಾರ್ಕ, ಟರ್ಮ, ಚೌಜ ಮೊದಲಾದ ಪಟ್ಟಣಗಳಿವೆ.

	3. ಆಂಡೀಸ್ ಶ್ರೇಣಿಗಳ ನಡುವಣ ಕಣಿವೆ ಪ್ರದೇಶ : ಇಕ್ಕಟ್ಟಾದ ಕಣಿವೆಗಳಿರುವ ಈ ಪ್ರದೇಶದಲ್ಲಿ ಆಗಿಂದಾಗ್ಗೆ ಜೋರಾಗಿ ಮಳೆ ಬೀಳುತ್ತದೆ. ಇಲ್ಲಿ ಸೆಕೆ ಹೆಚ್ಚು. ಇದು ಮಲೇರಿಯ, ಗಳಗಂಡ ಮುಂತಾದ ಹಲವು ವ್ಯಾಧಿಗಳ ಆಗರ. ಸಮುದ್ರ ಮಟ್ಟದಿಂದ 300 ಮೀ. ನಿಂದ 2,300 ಮೀ. ವರೆಗಿನ ಎತ್ತರದಲ್ಲಿರುವ ಪ್ರದೇಶವಿದು. 

	4. ಎತ್ತರದ ಬೆಂಗಾಡು ಪ್ರದೇಶ : ಈ ಪ್ರದೇಶ ಸಮುದ್ರ ಮಟ್ಟಕ್ಕೆ 3,500 ಮೀ. ನಿಂದ 4,000 ಮೀ. ವರೆಗಿನ ಎತ್ತರದಲ್ಲಿದೆ. ಇದು ಕಡಿದಾದ ಪರ್ವತ ಚೌಚುಗಳು ಹಾಗೂ ಪ್ರಪಾತಗಳಿಂದ ಕೂಡಿದೆ. ಇಲ್ಲಿಯದು ಶೀತಲ ವಾಯುಗುಣ. ಇಲ್ಲಿ ಪದೇ ಪದೇ ಮಂಜು ಕವಿಯುತ್ತದೆ. ಸಸ್ಯಗಳು ಕಡಿಮೆ. ಇಲ್ಲಿ ನೀಲಗಿರಿ ಜಾತಿಯ ಮರಗಳನ್ನು ಬೆಳೆಸಲಾಗಿದೆ. 

	5. ಉನ್ನತ ಆಂಡೀಸ್ ಪ್ರದೇಶ : ಸಮುದ್ರ ಮಟ್ಟಕ್ಕೆ 4,000 ಮೀ.ನಿಂದ 4,785 ಮೀ. ವರೆಗೆ ಎತ್ತರವಾಗಿರುವ ಪ್ರದೇಶವಿದು. ಇಲ್ಲಿ ವಿಶಾಲವಾದ ಚಪ್ಪಟೆ ನೆಲಗಳಿವೆ. ಇಲ್ಲಿ ಬಿಸಿಲಿನ ಹೊಡೆತ ಹೆಚ್ಚು. ಇದು ಸದಾ ಭಾರಿ ಗಾಳಿಗೆ ಪಕ್ಕಾಗಿರುತ್ತದೆ. ಇಲ್ಲಿಯದು ಶೀತ ವಾಯುಗುಣ. ಇಲ್ಲಿಯ ಉಷ್ಣತೆಯಲ್ಲಿ ತೀವ್ರ ಏರಿಳಿತಗಳಾಗುತ್ತವೆ. ಆದರೆ, ಇಲ್ಲಿ ನಾನಾ ಬಗೆಯ ಹಣ್ಣು ಮತ್ತು ಆಲೂಗಡ್ಡೆ ಬೆಳೆಯುತ್ತವೆ. ಇಲ್ಲಿ ನೀಲಗಿರಿ ಜಾತಿಯ ಮರಗಳನ್ನು ಬೆಳೆಸಲಾಗಿದೆ.

	6. ಉನ್ನತ ಪರ್ವತ ಶ್ರೇಣಿ ಪ್ರದೇಶ : 4,785 ಮೀ. ಗಿಂತ ಎತ್ತರದಲ್ಲಿರುವ ಕಡಿದಾದ, ಹಿಮಚ್ಛಾದಿತವಾದ, ಜ್ವಾಲಾಮುಖೀಯ ಕೋಡುಗಲ್ಲುಗಳ ಪ್ರದೇಶವಿದು. ವರ್ಷವಿಡೀ ಇಲ್ಲಿ ರಾತ್ರಿಯ ವೇಳೆಯ ಉಷ್ಣತೆ ಬರ್ಫ ಬಿಂದುವಿಗಿಂತ ಕೆಳಗಿರುತ್ತದೆ. ನೈಸರ್ಗಿಕ ಸಸ್ಯವಿಲ್ಲ. ಇಲ್ಲಿ ಖಾಯಂ ಜನವಸತಿ ಇಲ್ಲ. ಅತಿ ಎತ್ತರದ ಪರ್ವತ ಶಿಖರ ಹುಸ್ಕರನ್ 6,768 ಮೀ.

	7. ಉನ್ನತ ಅರಣ್ಯ ಪ್ರದೇಶ : ಪೂರ್ವ ಭಾಗದಲ್ಲಿರುವ ತಗ್ಗಾದ ಕಣಿವೆಗಳ ಅರಣ್ಯಗಳ, ಕಡಿದಾದ ಬೆಟ್ಟದೇಣುಗಳ, ಮೈದಾನಗಳ ಭಾಗವಿದು. ಇಲ್ಲಿ ಬೆಚ್ಚನೆಯ ಹವೆ ಇರುತ್ತದೆ. ಸಂಜೆಯ ವೇಳೆ ತಂಪಾಗಿರುತ್ತದೆ. ಅಲೆಯಲೆಯಾಗಿ ಇಲ್ಲಿ ನೆಲ ಏರಿಳಿಯುತ್ತದೆ. ವರ್ಷಕ್ಕೆ ಸುಮಾರು 4,000 ಮಿ.ಮೀ. ಮಳೆಯಾಗುವ ಈ ಪ್ರದೇಶದಲ್ಲಿ ಮರಗಳೂ ಹುಲ್ಲೂ ತುಂಬಿವೆ. ಇಲ್ಲಿ ಪಶುಪಾಲನೆ, ವ್ಯವಸಾಯ, ತೋಟಗಾರಿಕೆ ಮುಖ್ಯ ಕಸಬುಗಳು.

	8. ಅಮೆಜಾನ್ ಪ್ರದೇಶ : ಅಮೆಜಾನ್ ಮತ್ತು ಅದರ ಉಪನದಿಗಳು ಹರಿಯುವ ಮೈದಾನವಿದು. ಅಲ್ಲಲ್ಲಿ ಇವುಗಳಿಂದ ನೆಲ ಜವುಗಾಗಿದೆ. ಅಲ್ಲಲ್ಲಿ ಇವುಗಳಿಂದ ಸರೋವರಗಳುಂಟಾಗಿವೆ. ಇಲ್ಲಿಯ ನೆಲ ಫಲವತ್ತಾದ್ದು. ಇಲ್ಲಿಯದು ಉಷ್ಣ ವಾಯುಗುಣ. ಇಲ್ಲಿ ವರ್ಷಕ್ಕೆ ಸುಮಾರು 3,000 ಮಿ.ಮೀ. ಮಳೆಯಾಗುತ್ತದೆ. ಆಗಾಗ ನದಿಗಳು ದಡ ಮೀರಿ ಹರಿಯುತ್ತವೆ. ಈ ಪ್ರದೇಶದಲ್ಲಿ ಬಗೆಬಗೆಯ ಮರಗಳಿಂದ ಕೂಡಿದ ಕಾಡುಗಳಿವೆ. 

	ನದಿಗಳು: ಆಂಡೀಸ್ ಶ್ರೇಣಿಗಳಿಂದ ಪóಶ್ಚಿಮಕ್ಕೆ ಹರಿದು ಪೆಸಿಫಿಕ್ ಸಾಗರವನ್ನು ಸೇರುವ ನದಿಗಳು ಐವತ್ನಾಲ್ಕು. ಆದರೆ, ಅವುಗಳಲ್ಲಿ ನೌಕಾಯಾನ ಯೋಗ್ಯವಾದ ನದಿ ಎಂದರೆ ಟೂಂಬೇಸ್ ಒಂದೇ. ಈ ನದಿಗಳ ನೀರಿನಲ್ಲಿ ಐದನೆಯ ಒಂದರಷ್ಟನ್ನು ಮಾತ್ರ ವ್ಯವಸಾಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಭೂಮಿಯಲ್ಲೇ ಅತ್ಯಂತ ಹೆಚ್ಚು ಪ್ರವಾಹದಿಂದ ಕೂಡಿದ ನದಿಯಾದ ಅಮೆಜಾನ್ ನದಿ ಪೆರುವಿನಲ್ಲಿ ಉಗಮಿಸುತ್ತದೆ. ನೇಕ ದೊಡ್ಡ ನದಿಗಳು ಆಂಡೀಸ್ ಪರ್ವತಗಳಿಂದ ಉತ್ತರ ಹಾಗೂ ಪೂರ್ವಕ್ಕೆ ಹರಿದು, ಪೂರ್ವ ಪೆರುವಿನ ಬಯಲು ಪ್ರದೇಶವನ್ನು ದಾಟಿ, ಅಮೆಜಾನ್ ನದಿಯನ್ನು ಸೇರುತ್ತವೆ. ಇವುಗಳಲ್ಲಿ ಅತಿ ದೊಡ್ಡ ನದಿಗಳೆಂದರೆ ಮಾರನಾನ್ ಹಾಗೂ ಉಕಯಾಲಿ. ಅಮೆಜಾನ್, ಮಾರನಾನ್, ಉಕಯಾಲಿ, ಯಲಾರಿ ಇವೆಲ್ಲ ನದಿಗಳೂ ನೌಕಾಯಾನಕ್ಕೆ ಯೋಗ್ಯವಾಗಿವೆ. ದಕ್ಷಿಣದಲ್ಲಿ ನಾಲ್ಕು ನದಿಗಳು ಕೋಲಾವೋ ಪ್ರಸ್ಥಭೂಮಿಯನ್ನು ದಾಟಿ ಟಿಟಿಕಾಕ ಸರೋವರವನ್ನು ಸೇರುತ್ತವೆ. ಬೊಲಿವಿಯ ಮತ್ತು ಪೆರು ದೇಶಗಳ ನಡುವೆ ಇರುವ ಈ ಸರೋವರ 8,300 ಚ.ಕಿ.ಮೀ. ವಿಸ್ತಾರವಾಗಿದೆ. ಸಮುದ್ರ ಮಟ್ಟದಿಂದ 3,810 ಮೀ. ಎತ್ತರದಲ್ಲಿರುವ ಇದು ಜಗತ್ತಿನ ಅತ್ಯುನ್ನತ ನೌಕಾಯಾನ ಯೋಗ್ಯ ಜಲಭಾಗ. 

	ವಾಯುಗುಣ: ಪೆರು ಉಷ್ಣವಲಯದಲ್ಲಿರುವ ದೇಶ. ಅದರ ಉತ್ತರದ ಅಂಚಿನಲ್ಲಿ ಸಮಭಾಜಕ ವೃತ್ತ ಹಾದು ಹೋಗುತ್ತದೆ. ಆದರೂ ಕರಾವಳಿ ಭಾಗದಲ್ಲಿ ಸಮಭಾಜಕೀಯ ವಾಯುಗುಣವಿಲ್ಲ. ಉಷ್ಣತೆ 12.20ಅ ಯಿಂದ 32.20ಅ ವರೆಗೆ ವ್ಯತ್ಯಾಸವಾಗುತ್ತದೆ. ರಾಜಧಾನಿಯಾದ ಲೀಮಾದಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 20.30ಅ. ಪಶ್ಚಿಮದಲ್ಲಿ ಸಮುದ್ರದ ಶೀತ ಪ್ರವಾಹದ ಮೇಲಿಂದ ಬೀಸುವ ಗಾಳಿ ತಂಪಾಗಿರುತ್ತದೆ. ಪೂರ್ವದಿಂದ ಬೀಸುವ ಮೋಡದಿಂದ ಕೂಡಿದ ಗಾಳಿಯನ್ನು ಆಂಡೀಸ್‍ವ ಕಾರ್ಡಿಲೇರ ಆಕ್ಸಿಡೆಂಟಾಲ್ ಶ್ರೇಣಿ ತಡೆಯುತ್ತದೆ. ಸಮುದ್ರದಿಂದ ದಂಡೆಗೆ ಬೀಸುವ ಗಾಳಿಯಿಂದ ಇಬ್ಬನಿ ಕವಿಯುತ್ತದೆ. ಮೇ-ಅಕ್ಟೋಬರ್ ಕಾಲದಲ್ಲಿ ಇದು ಮಳೆಯಾಗಿ ಪರಿಣಮಿಸುತ್ತದೆ. ಸುಮರು 500 ಮಿ.ಮೀ. ಮಳೆಯಾಗುತ್ತದೆ. ಪೆರುವಿನ ಪರ್ವತ ಪ್ರದೇಶದ ವಾಯುಗುಣದ ಮೇಲೆ ಅಕ್ಷಾಂಶಕ್ಕಿಂತಲೂ ಎತ್ತರದ ಪ್ರಭಾವ ಹೆಚ್ಚು. ಚಳಿಗಾಲದಲ್ಲಿ, ಎಂದರೆ ಅಕ್ಟೋಬರಿನಿಂದ ಏಪ್ರಿಲ್‍ವರೆಗೆ, ಇಲ್ಲಿ ಮಳೆಗಾಲ. ಇದು ತೀರಪ್ರದೇಶಕ್ಕೆ ವಿರುದ್ಧವಾದ್ದು. ಋತುವಿನಿಂದ ಋತುವಿಗೆ ಹಗಲಿನಿಂದ ರಾತ್ರಿಗೆ ಉಷ್ಣತೆಯಲ್ಲಿ ಹೆಚ್ಚು ವ್ಯತ್ಯಾಸವಿರುತ್ತದೆ. ಪೂರ್ವದ ಕಾಡುಗಳಲ್ಲಿ ಮಳೆ ಹೆಚ್ಚು. ಅಲ್ಲಿ ವಾರ್ಷಿಕ ಮಳೆ 2,900 ಮಿ.ಮೀ.- 3.176 ಮಿ.ಮೀ. ಉಷ್ಣತೆ 240ಅ ನಿಂದ 350ಅ ವರೆಗೆ.

	ಸಸ್ಯ ಮತ್ತು ಪ್ರಾಣಿಗಳು: ವಿಭಿನ್ನ ವಾಯುಗುಣ ಮತ್ತು ಮೇಲ್ಮೈ ಲಕ್ಷಣಗಳಿಂದಾಗಿ ಇಲ್ಲಿಯ ಸಸ್ಯ ಹಾಗೂ ಪ್ರಾಣಿ ಜೀವನದಲ್ಲಿ ವೈವಿಧ್ಯವಿದೆ. ಸಮುದ್ರ ತೀರದ ಮರುಭೂಮಿಯಲ್ಲಿ ಅಲ್ಲಲ್ಲಿ ಕುರುಚಲು ಹಾಗೂ ಕಳ್ಳಿ ಗಿಡಗಳೂ ನೀರು ಇರುವೆಡೆಗಳಲ್ಲಿ ತಾಳೆ ಜಾತಿಯ ಮರಗಳೂ ಇವೆ. 800 ಮೀ - 2,400 ಮೀ. ನಡುವಣ ಇಳುಕಲ ನೆಲದಲ್ಲಿ ಬಗೆಬಗೆಯ ಹೂಗಿಡಗಳು ಹಾಗೂ ಹುಲ್ಲೂ 3,600 ಮೀ. ಗಳಷ್ಟು ಎತ್ತರವಾದ ಕಡೆ ಟಂಡ್ರಾ ಹುಲ್ಲೂ ಬೆಳೆಯುತ್ತವೆ. ಅಮೆಜಾನ್ ನದೀ ವ್ಯವಸ್ಥೆ ಇರುವ ಪೂರ್ವದ ಮೈದಾನದಲ್ಲಿ ದಟ್ಟವಾದ ಅರಣ್ಯಗಳಿವೆ. ಸರಸಪರಿಲ, ಸಿಂಕೋನ, ಕೋಕೊ, ರಬ್ಬರ್, ಮಹಾಗನಿ ಮೊದಲಾದುವು ಇವೆ. 

	ಪಶ್ಚಿಮ ಕರಾವಳಿಯಲ್ಲಿ ಸಾಗರಿಕ ಸಸ್ಯಗಳನ್ನು ಅವಲಂಬಿಸಿದ ಅನೇಕ ಬಗೆಯ ಸಾಗರಿಕ ಪ್ರಾಣಿಗಳಿವೆ. ಅನೇಕ ಬಗೆಯ ಮೀನುಗಳೂ ಕಡಲಹಕ್ಕಿಗಳೂ ಇವೆ. ಆಂಡೀಸ್ ಪರ್ವತಗಳಲ್ಲಿ ರಣಹದ್ದು, ಬಾತು, ಕಾಡುಕೋಳಿ, ಪ್ಯೂಮ, ಲಾಮ, ಅಲ್ಪಾಕ, ಗ್ವಾನಾಕೊ ಮುಂತಾದ ಪ್ರಾಣಿಗಳಿವೆ. ಪೂರ್ವ ಪೆರುವಿನ ಕಾಡುಗಳಲ್ಲಿ ಗಿಳಿ, ಜಾಗ್ವಾರ್ , ಕೋತಿ, ಮೊಸಳೆ ಮುಂತಾದವು ತುಂಬಿವೆ.

ಜನಜೀವನ

	ಜನ: ಸ್ಪಾನಿಷರು ಬರುವುದಕ್ಕೆ ಮುಂಚೆ ಪೆರುವಿನಲ್ಲಿ ಸ್ಥಳೀಯ ಇಂಡಿಯನ್ ಬಣಗಳು ಸುವ್ಯವಸ್ಥಿತ ಜೀವನವನ್ನು ಸಾಗಿಸುತ್ತಿದ್ದುವು. ಸ್ಪೇನ್ ದಾಳಿಕಾರರು ನಾಶ ಮಾಡಿದ ಇಂಡಿಯನ್ ಜನರ ಪಟ್ಟಣಗಳ ನಿವೇಶನಗಳಲ್ಲಿ ಸಮುದ್ರದಂಚಿನಲ್ಲಿ ಹಾಗೂ ಚಿಲುಮೆಗಳಿರುವ ಜಲಾಶಯ ಭಾಗಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿ ನೆಲೆಸಿದರು. ತಮ್ಮ ಸರ್ಕಾರ ಪದ್ಧತಿ, ಸಂಸ್ಕøತಿ ಮತ್ತು ಆರ್ಥಿಕ ಜೀವನವನ್ನು ಸ್ಥಳೀಯ ಜನರ ಮೇಲೆ ಹೊರಿಸಿ ಅವರೊಡನೆ ಮಿಲನಗೊಂಡರು. ಸ್ಪ್ಯಾನಿಷ್ ಭಾಷೆ, ಕ್ಯಾತೊಲಿಕ್ ಧರ್ಮ ಇವು ಸ್ಥಳೀಯರ ಜೀವನದಲ್ಲಿ ಬೆಳೆದುಕೊಂಡುವು. ಸ್ಪ್ಯಾನಿಷರು ಬಂದಾಗ ತಮ್ಮೊಂದಿಗೆ ನೀಗ್ರೊ ಗುಲಾಮರನ್ನು ತಂದರು. ಕಾಲಕ್ರಮದಲ್ಲಿ ಗುಲಾಮ ಪದ್ಧತಿ ರದ್ದಾದಾಗ ಜಮೀನುಗಳಲ್ಲಿ ಕೆಲಸ ಮಾಡಲು ಚೀನೀ ಹಾಗೂ ಜಪಾನೀಯರನ್ನು ಸ್ವಾಗತಿಸಲಾಯಿತು. ರಾಜ್ಯದಲ್ಲಿ ಬುಡಕಟ್ಟುಗಳ ತಾರತಮ್ಯವಿಲ್ಲದ ಜೀವನವಿದೆ. ಪರಸ್ಪರ ಬೆರತಿರುವ ಜನರಲ್ಲಿ ಪ್ರಧಾನ ಗುಂಪುಗಳು ಇವು; 1. ಮೆಸ್ಟಿಜೊ: ಬಿಳಿಯರೊಂದಿಗೆ ಬೆರೆತ ಇಂಡಿಯನ್ ಜನ. 2. ಮುಲಾಟೊ: ಬಿಳಿಯರೊಂದಿಗೆ ಬೆರೆತ ಕಪ್ಪು ಜನ. 3. ಇನ್‍ಜರ್ಟೊ: ಚೀನೀ ಅಥವಾ ಜಪಾನೀಯರೊಡನೆ ಬೆರೆತ ಬಿಳಿಯ ಜನ. 4. ಜಾಂಬೋ: ಇಂಡಿಯನರೊಂದಿಗೆ ಬೆರೆತ ಕಪ್ಪು ಜನ. 5. ಚಿನೊಚೊಲೊ: ಚೀನೀ ಅಥವಾ ಜಪನೀಯರೊಡನೆ ಬೆರೆತ ಕಪ್ಪು ಜನ.

	ಜನರ ಆಚಾರ ಹಾಗೂ ಆದರ್ಶಗಳಲ್ಲಿ ವ್ಯತ್ಯಾಸಗಳು ಎದ್ದು ಕಾಣುತ್ತವೆ. ಮೆಸ್ಟಿಜೊ ಜನರು ಕರಾವಳಿಯ ಪಟ್ಟಣಗಳಲ್ಲಿ ವಾಸಿಸುತ್ತಾರೆ. ರಾಷ್ಟ್ರದ ಸಂಪತ್ತಿನಲ್ಲಿ ಬಹುಪಾಲು ಇವರದು. ಇಂಡಿಯನ್ನರಲ್ಲಿ ಸೇ. 79 ರಷ್ಟು ಮಂದಿ ಮೆಸ್ಟಿಜೊ ಮತ್ತು ಯೂರೋಪಿಯನರಿಂದ ಬೇರೆಯಾಗಿ ಬೆಟ್ಟಗಾಡುಗಳಲ್ಲಿದ್ದು, ಲಾಮ ಪ್ರಾಣಿಗಳನ್ನು ಪೋಷಿಸುತ್ತ ಸóಣ್ಣ ಹಿಡುವಳಿಗಳಲ್ಲಿ ಬೇಸಾಯ ಮಾಡಿ ಜೀವಿಸುತ್ತಾರೆ. 

	ಜನಸಂಖ್ಯೆ: ಇಂಕ ಸಾಮ್ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಪೆರು ದೇಶದ ಜನಸಂಖ್ಯೆ 1,20,00,000. ಸ್ಪ್ಯಾನಿಷರ ಆಕ್ರಮಣದ ತರುವಾಯ 50 ವರ್ಷಗಳಲ್ಲಿ ಸುಮಾರು 1,00,00,000 ಮಂದಿ ಹತರಾದರು. 1793 ರಲ್ಲಿ ಜನಸಂಖ್ಯೆ 10,76,000 ಇತ್ತು. 1940-71 ರ ನಡುವೆ ಜನಸಂಖ್ಯೆ ಸೇ. 50 ರಷ್ಟು ಹೆಚ್ಚಿದೆ. 1992ರಲ್ಲಿದ್ದಂತೆ ದೇಶದ ಜನಸಂಖ್ಯೆ 22,454,000. ಸಾಕ್ಷರತೆ ಶೇಕಡಾ 87. 
ಪೆರುವಿನ ಪ್ರಮುಖ ನಗರಗಳು ಮತ್ತು ಅವುಗಳ ಜನಸಂಖ್ಯೆ (2005)ರ ಅಂದಾಜಿನಂತೆ ಪೆರುರಾಜಧಾನಿ ಲೀಮ ನಗರ ಜನಸಂಖ್ಯೆ ಅರೆಕೀಪನಗರ ಜನಸಂಖ್ಯೆ 8,37,300, ಟುಜಿಲೊ 7,25, 200 ಚೀಕ್ಲಾಯೊ 5,98,000.

ಕುಸ್ಕೋ

	ಆಂಡೀಸ್ ಪರ್ವತಗಳ ಮಡಿಲಿನಲ್ಲಿರುವ ಕುಸ್ಕೋ 11,600 ಅಡಿಗಳಷ್ಟು ಎತ್ತರದಲ್ಲಿದೆ. ಸೂರ್ಯ ಮರೆಯಾದೊಡನೆ ಸಾಕಷ್ಟು ಚಳಿಯಾಗಬಲ್ಲ ಸ್ಥಳವಿದು. ಒಂದೇ ದಿನದಲ್ಲಿ 67 ಎಫ್ ಇದ್ದದ್ದು 34 ಎಫ್ ಗೆ ಇಳಿಯಬಲ್ಲದು. ಕುಸ್ಕೋ ಏರು ಎತ್ತರದ ಬೆಟ್ಟಗಳ ನಡುವಿನ ವಿಶಾಲ ಕಣಿವೆಯಲ್ಲಿ ಅಡಗಿ ಮಲಗಿದೆ.

	ಕುಸ್ಕೋ ಬಹಳ ಪ್ರಮುಖವಾದ ಐತಿಹಾಸಿಕ ತಾಣ. ಪುರಾತನ ಇನ್ಕಾ ಸಾಮ್ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ರಾಜಧಾನಿ ಇದು. ಇನ್ಕಾಗಳಿಗೆ ಕುಸ್ಕೋ ಭೂಮಿಯ ಕೇಂದ್ರಬಿಂದುವಾಗಿತ್ತು. ಇನ್ಕಾಗಳ ಕೆಚುವಾ ಭಾಷೆಯಲ್ಲಿ `ಕುಸ್ಕೋ ಎಂದರೆ `ನಾಭಿ ಎಂಬ ಅರ್ಥ. ಇದು ಭುಮಿಯ ನಡುಮಧ್ಯೆದಲ್ಲಿ, ನಾಭಿಯಲ್ಲಿದೆ ಎಂದು ನಂಬಿದ್ದರು. ಇಲ್ಲಿಂದ ಕೆಚುವಾ ಸೇನೆ ನಾಲ್ಕು ದಿಕ್ಕಿಗೂ ಸಾಗಿ ಇನ್ಕಾ ಸಾಮ್ರಾಜ್ಯವನ್ನು ಕಟ್ಟಿ ಆಳಿತು. ಇವರು ಸೂರ್ಯದೇವರ ಆರಾಧಕರು. ಸೂರ್ಯದೇವನ ಆರಾಧನೆ ಇಲ್ಲಿಂದ ಆರಂಭವಾಗಿ ಇಡೀ ಆಂಡಿಯನ್ ಪ್ರದೇಶವನ್ನು ಆವರಿಸಿತು.

	ಕುಸ್ಕೋ ಕುರಿತಂತೆ ಅದ್ಭುತ ದಂತಕಥೆಗಳಿವೆ. ಇನ್ಕಾಗಳ ಪ್ರಮುಖ ಪುರಾಣದ ಪ್ರಕಾರ ಸೂರ್ಯದೇವ ತನ್ನ ಮಗನಾದ ಮಾನ್ಕೋ ಕಪಾಕನನ್ನು, ಚಂದ್ರ ತನ್ನ ಮಗಳು ಮಾಮಾ ಒಕ್ಲೊಳನ್ನು ಈ ನೆಲದಲ್ಲಿ ಸಂಸ್ಕøತಿ ಮತ್ತು ಜ್ಞಾನೋದಯದ ಬೆಳಕನ್ನು ಹರಡಲು, ಕತ್ತಲೆಯ ಖಂಡದಲ್ಲಿ ಜ್ಯೋತಿಯನ್ನು ಬೆಳಗಳು ಕಳುಹಿಸಿಕೊಟ್ಟರು. ಇವರು ಪವಿತ್ರ ಟಿಟಿಕಾಕಾ ಸರೋವರದಿಂದ ಉದ್ಭವಿಸಿ ಎದ್ದು ಬಂದರು. ಅಲ್ಲಿಂದ ಸಾಮ್ರಾಜ್ಯವನ್ನು ಕಟ್ಟಲು ತಾಣ ಹುಡುಕಿ ಹೊರಟರು. ಇಂದಿನ ಕುಸ್ಕೋ ತಾಣವನ್ನು ತಲುಪಿದಾಗ, ಮಾಂಕೋ ತನ್ನ ಸುವರ್ಣ ದಂಡವನ್ನು ನೆಲಕ್ಕೆ ಬಡಿದ, ಅದು ಫಲವತ್ತಾದ ನೆಲದಲ್ಲಿ ಆಳಕ್ಕೆ ಇಳಿಯಿತು. ಮಾಂಕೋ ಈ ತಾಣವನ್ನು ತನ್ನ ಸಾಮ್ರಾಜ್ಯದ ರಾಜಧಾನಿಯಾಗಿಸಿದ. ಈ ನೆಲವನ್ನು `ಕುಸ್ಕೋ ಎಂದು ಕರೆದ. ಕುಸ್ಕೋ ಮತ್ತು ಪವಿತ್ರ ಕಣಿವೆ (sಚಿಛಿಡಿeಜ vಚಿಟಟeಥಿ oಜಿ ಣhe iಟಿಛಿಚಿs) ಇನ್ಕಾಗಳ ಭವ್ಯ ಇತಿಹಾಸವನ್ನು ನೂರಾರು ವರ್ಷಗಳ ಕಾಲ ಹಾಡಿತು.

	ಕುಸ್ಕೋ ಕ್ರಿ.ಶ. 1100ದಲ್ಲಿ ಸ್ಥಾಪಿತವಾದ ನಗರ. ಪಶ್ಚಿಮ ಗೋಲದ ಅತ್ಯಂತ ಪುರಾತನ ನಗರ. ಕುಸ್ಕೋ ಇನ್ಕಾಗಳಿಗೆ ಮತ್ತು ಅವರ ಪ್ರಜೆಗಳಿಗೆ ಕೇವಲ ರಾಜಧಾನಿ ಮಾತ್ರವಾಗಿರಲಿಲ್ಲ. ಕುಸ್ಕೋ ಪವಿತ್ರ ಯಾತ್ರಾಸ್ಥಳವಾಗಿತ್ತು. ಮುಸ್ಲಿಮರಿಗೆ ಮೆಕ್ಕಾದಂತೆ, ಕೆಚುವಾಗಳಿಗೆ ಕುಸ್ಕೋ. ಇಂದು ಇದು ಪೆರುವಿನ ಪ್ರಮುಖ ವಾಣಿಜ್ಯ ಕೇಂದ್ರ. ಎರಡೂ ಮುಕ್ಕಾಲು ಲಕ್ಷ ಜನಸಂಖ್ಯೆಯ ಈ ನೆಲದಲ್ಲಿ ಬಹುಪಾಲು ಜನ ಕೆಚುವಾಗಳು.

ಅರಿಕೀಪಾ

	ಅರಿಕೀಪಾ ದಕ್ಷಿಣ ಪೆರುವಿನಲ್ಲಿರುವ ನಗರ. ಒಂದು ಮಿಲಿಯನ್ ಜನಸಂಖ್ಯೆ. ಈ ನಗರವನ್ನು ಸುತ್ತುಗಟ್ಟಿ ನಿಂತಿವೆ, `ಮಿಸ್ಟಿ, `ಚಚಾನಿ ಮತ್ತು `ಪಿಚು-ಪಿಚು ಎಂಬ ಮೂರು ಜ್ವಾಲಾಮುಖಿಗಳು. ಅದರಲ್ಲಿ `ಮಿಸ್ಟಿ ಜ್ವಾಲಾಮುಖಿ ಇಂದಿಗೂ ಜೀವಂತ. ಈ ಜ್ವಾಲಾಮುಖಿ ಲಾವಾ ಉಗುಳಿ 500 ವರ್ಷಗಳಾಗಿವೆ. ಯಾವ ಕ್ಷಣದಲ್ಲೂ ಮಿಸ್ಟಿ ಮತ್ತೆ ಸ್ಫೋಟಿಸಿ ಲಾವಾರಸವನ್ನು ಉಗಿದು, ಇಡೀ ನಗರವನ್ನು ಮುಚ್ಚಿ ಬಿಡಬಹುದು ಎಂದು ಜ್ವಾಲಾಮುಖಿತಜ್ಞರು ಹೇಳುತ್ತಾರೆ.

	ಈ ನಗರದ ಪ್ರಮುಖ ಕಟ್ಟಡಗಳೆಲ್ಲ ಬಿಳಿ ಬಣ್ಣದ ಜ್ವಾಲಾಮುಖಿಯ ಕಲ್ಲುಗಳಿಂದ ಕಟ್ಟಿದ್ದು, ಹಾಗೆಂದೇ ಈ ನಗರವನ್ನು `ವೈಟ್ ಸಿಟಿ' ಎನ್ನುವುದುಂಟು. ಚಚಾನಿ ಜ್ವಾಲಾಮುಖಿ ಉಗುಳಿದ ಲಾವಾರಸ ಕಠಿಣ ಕಲ್ಲಾಯಿತು. ಈ ಬೂಕಲ್ಲುಗಳಿಂದ ಕಟ್ಟಡಗಳನ್ನು ಕಟ್ಟಿದರು. ನೆಲಕ್ಕೆ ಹೊದಿಸಿರುವುದೂ ಅದೇ ಜ್ವಾಲಾಮುಖಿಯ ಕಲ್ಲುಗಳನ್ನು. ಇದು ಲೀಮಾ ನಂತರ ಪೆರುವಿನ ಅತಿ ದೊಡ್ಡ ನಗರ.

	1540ರಲ್ಲಿ ಅರಿಕೀಪಾ ಸ್ಥಾಪಿತವಾಯಿತು. ಗೋಧಿ, ಮೆಕ್ಕೆಜೋಳ, ದ್ರಾಕ್ಷಿ ಯಥೇಚ್ಛವಾಗಿ ಬೆಳೆವ ವಾಣಿಜ್ಯ ನಗರಿ. `ಅರಿಕೀಪಾ ಎಂದರೆ ಕೆಚುವಾ ಭಾಷೆಯಲ್ಲಿ `ಬನ್ನಿ, ಇರಿ' ಎಂದು ಅರ್ಥ. ಇನ್ಕಾ ದೊರೆ ಮಯ್ತಾ ಕ್ಯಾಪಕ್ ತನ್ನ ಯೋಧರಿಗೆ ಈ ಸುಂದರ ನೆಲದಲ್ಲಿ ತಂಗಲು ಕರೆದು ಸ್ವಾಗತಿಸಿದ ರೀತಿಯದು. ಅರಿಕೀಪಾ ಆಂಡೀಸ್ ಪರ್ವತ ಶಿಖರಗಳ ಬುಡದಲ್ಲಿಯ ಸುಂದರ ಕಣಿವೆಯಲ್ಲಿ ಸುಮಾರು 7200 ಅಡಿ ಎತ್ತರದಲ್ಲಿರುವ ನಗರ.

ಇಕಿಟಸ್

ಇಕಿಟಸ್ ಪೆರುವಿನ ಅಮೆಜಾನ್ ಬೇಸನ ನಟ್ಟನಡುವಿದೆ. ಇಕಿಟಸ್ `ಲೊರೆತೋ ಎಂಬ ಪೆರುವಿನ ಅತಿ ದೊಡ್ಡ ರಾಜ್ಯದ ರಾಜಧಾನಿ. ಅರಣ್ಯದ ನಡುವೆ ಸಿಕ್ಕಿಬಿದ್ದ ನಗರ ಇಕಿಟಸ್. ಸುತ್ತಲೂ ಅಮೆಜಾನ್ ಕಾಡು, ಅಮೆಜಾನ್ ನದಿಯ ಎಡ ತಟದಲ್ಲಿ ನಿಂತ ನಗರವಿದು. ನಾಪೋ ನದಿ ಮತ್ತು ಅಮೆಜಾನ್, ಇಕಿಟಸಗೆ ಹತ್ತಿರವಾಗಿ ಸಂಗಮಗೊಳ್ಳುತ್ತವೆ. ಮೂರೂವರೆ ಲಕ್ಷ ಜನರಿರುವ ಊರು. ಇಕಿಟಸ್ ಅನ್ನು ಹೊರಜಗತ್ತಿಗೆ ಸೇರ್ಪಡಿಸಲು ಇರುವುದು ಬರೀ ನದಿಗಳು ಮತ್ತು ಒಂದು ಸಣ್ಣ ವಿಮಾನ ನಿಲ್ದಾಣ, ಇದೊಂದು ವಿಶೇಷವಾದ ಬಂದರು ನಗರ. ಪೆರುವಿನ ಅಮೆಜಾನ್ ಜಂಗಲ್ ಬೇಸನಲ್ಲಿಯೇ ಅತ್ಯಂತ ಪ್ರಮುಖ ವಾಣಿಜ್ಯ ನಗರವಿದು. ಸುತ್ತುವರೆದ ಅರಣ್ಯದ ನಡುವೆ ಸಿಕ್ಕಿಬಿದ್ದರೂ, ಆಧುನಿಕಗೊಂಡ ನಗರ. ಅಮೆಜಾನಿನ ಅದ್ಭುತಗಳನ್ನು ಇಕಿಟಸ್‍ನಲ್ಲಿ ಕಾಣಬಹುದು.

ಧರ್ಮ: ಪ್ರಾಚೀನ ಪೆರುವಿನಲ್ಲಿ ಶಕ್ತಿ ಪೂಜೆ, ಬಹುದೇವತಾರಾಧನೆ ಮತ್ತು ವಿಶ್ವ ದೇವೈಕ್ಯವಾದ ರೂಢಿಯಲ್ಲಿದ್ದುವು. ವಿರಕೋಪ ಸೃಷ್ಟಿದೇವತೆ. ಜನರು ಸೂರ್ಯ, ಚಂದ್ರ ಮತ್ತು ಮಿಂಚಿನ ದೇವತೆಗಳನ್ನು ಆರಾಧಿಸುತ್ತಿದ್ದರು. ಸ್ಥಳೀಯ ದೇವತೆಗಳಿಗೆ ಬೃಹತ್ ದೇವಾಲಯಗಳ ನಿರ್ಮಾಣವಾಗಿತ್ತು. ನರಬಲಿ ಸಾಮಾನ್ಯವಾಗಿತ್ತು. 

	ಇನ್ಕಾಗಳು ಸೂರ್ಯನನ್ನು ಪೂಜಿಸುತ್ತಿದ್ದರು. ಭೂಮಿಯನ್ನು, ನೀರನ್ನು, ಚಂದ್ರನನ್ನು, ತಾರೆಗಳನ್ನು, ಪರ್ವತಗಳನ್ನು, ಪರಿಸರವನ್ನು ಹಾಳು ಮಾಡದೆ ಪೂಜಿಸಿದರು. ಬೇಟೆಯನ್ನು ತೀವ್ರವಾಗಿ ನಿಯಂತ್ರಿಸಿದ್ದರು, ಎಂತಹ ಗಿಡಗಳನ್ನೂ ಎಂತಹ ಪ್ರದೇಶದಲ್ಲಾದರೂ ಬೆಳೆಯಬಲ್ಲವರಾಗಿದ್ದರು.

	ಆಂಡೀಸ್ ಪರ್ವತ ಶ್ರೇಣಿಗಳಲ್ಲಿ ಪರ್ವತಗಳು ಎಷ್ಟು ಒತ್ತೊತ್ತಾಗಿವೆ ಎಂದರೆ ನಡುವಿನ ಕಣಿವೆ ಅತಿ ಕಿರಿದು, ವ್ಯವಸಾಯಕ್ಕೆ ಸಮತಟ್ಟು ಜಾಗದ ಕೊರತೆ, ಅದಕ್ಕಾಗಿ ಇನ್ಕಾ ಜನರು ಬೆಟ್ಟವನ್ನೇ ಕಡಿದು ಮೆಟ್ಟಿಲು ಮೆಟ್ಟಿಲು ಮಾಡಿ ಬೆಳೆ ಬೆಳೆದರು. ಇಲ್ಲಿ ಅನೇಕಾನೇಕ ಪರ್ವತಗಳಲ್ಲಿ ಇನ್ಕಾಗಳು ನೂರಾರು ವರ್ಷಗಳ ಹಿಂದೆ ಕಡಿದು ಮಾಡಿದ ಟೆರೇಸಸಗಳ ಮೇಲೆ ಈಗಲೂ ಮೆಕ್ಕೆಜೋಳ ಬೆಳೆಯುತ್ತಿರುವುದನ್ನು ಕಾಣಬಹುದು.

	ಇನ್ಕಾಗಳು ಸೂರ್ಯನ ಆರಾಧಕರು. ಕುಸ್ಕೋ ನಗರದಲ್ಲಿ ಇನ್ಕಾ ದೊರೆಗಳು ಆಚರಿಸಿದ ಪ್ರಸಿದ್ಧ ನಾಲ್ಕು ಹಬ್ಬಗಳಲ್ಲಿ, ಸೂರ್ಯನ ಆರಾಧನೆಯ ಹಬ್ಬ ಅತ್ಯಂತ ಪ್ರಮುಖವಾದದ್ದು. ಜೂನ್ ತಿಂಗಳಲ್ಲಿ ಬರುವ ಈ ಹಬ್ಬವನ್ನು `ರೇಮಿ ಎನ್ನುತ್ತಾರೆ. ಸೂರ್ಯನನ್ನು `ವಿಶ್ವದ ದೇವನೆಂದು, ತನ್ನ ಬೆಳಕು ಮತ್ತು ಶಕ್ತಿಯಿಂದ ಈ ಭೂಮಿಯ ಮೇಲಿನ ಎಲ್ಲವನ್ನು ಸೃಷ್ಟಿಸಿ ಕಾಯ್ದ ಭಗವಂತನೆಂದು ಆರಾಧಿಸುತ್ತಾರೆ.
ಅವರು ಆರಾಧಿಸುತ್ತಿದ್ದ ಮತ್ತೊಂದು ದೈವ ವೀರಕೋಚ, ವಿಶ್ವದ ದೊರೆ, ಸ್ಥಳೀಯರ ನಂಬಿಕೆಯಂತೆ, ಈ ವಿಶ್ವದ ಸೃಷ್ಟಿಗೆ ಮೊದಲು ಆದಿಯಲ್ಲಿ, ವೀರಕೋಚ ಎಂಬವನಿದ್ದ. ಆತ ಸೂರ್ಯ, ಚಂದ್ರ, ತಾರೆಗಳಿಲ್ಲದ ಕತ್ತಲ ಜಗತ್ತನ್ನು ಸೃಷ್ಟಿಸಿದ. ನಂತರ ಆತ ತನ್ನಂತೆಯೇ ಕಾಣುವ ಮನುಷ್ಯನನ್ನು, ತನ್ನ ಪ್ರತಿಬಿಂಬದಂತೆ ಸೃಷ್ಟಿಸಿದ. ನಂತರ ಆತ ತನ್ನಂತೆಯೇ ಕಾಣುವ ಮನುಷ್ಯನನ್ನು, ತನ್ನ ಪ್ರತಿಬಿಂಬದಂತೆ ಸೃಷ್ಟಿಸಿದ. ಅವರೆಲ್ಲ ಕತ್ತಲಲ್ಲಿಯೇ ಬದುಕುತ್ತಿದ್ದರು. ವೀರಕೋಚ ಅವರು ಜಗಳವಾಡದೆ ಜೊತೆಯಲ್ಲಿ ಬದುಕಬೇಕೆಂದು ವಿಧಿಸಿದ್ದ. ಆದರೆ ಅವರು ವೀರಕೋಚನ ಆಜ್ಞೆಯನ್ನು ಮೀರಿದರು. ವೀರಕೋಚ ಶಪಿಸಿದ ಕೆಲವರನ್ನು ಭೂಮಿ ನುಂಗಿತು, ಇನ್ನು ಕೆಲವರನ್ನು ಸಮುದ್ರ ನುಂಗಿರು. ಅಲ್ಲಿ ಅಗಾಧ ಪ್ರವಾಹ ಉಕ್ಕಿ ಬಂದಿತು, ಅದನ್ನವರು `ಉನು ಪಚಕುಟಿ' ಅಂದರೆ `ಭೂಮಿಯನ್ನು ಉರುಳಿಸಿ ಹಾಕಿದ ನೀರು ಎಂದು ಕರೆದರು. ಪೆರುವಿಗವರು ಹೇಳುತ್ತಾರೆ. 60 ರಾತ್ರ್ರಿ ಮತ್ತು 60 ದಿನ ಸತತ ಮಳೆ ಸುರಿಯಿತು. ಸೃಷ್ಟಿಯ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಈ ಮಹಾನ್ ಪ್ರವಾಹದಿಂದ ಅಳಿದುಳಿದವರು ಈ ನೆಲದ ಪೂರ್ವಜರು. ಸ್ಥಳೀಯ ಪೆರುವಿಗರ ಪುರಾಣಗಳು ಹೇಳುವ ಕತೆ ಇದು.
ಸ್ಪ್ಯಾನಿಷರು ಇಂಡಿಯನರಲ್ಲೂ ಕ್ಯಾತೊಲಿಕ್ ಮತವನ್ನು ಹರಡಿ ನೂರಾರು ಚರ್ಚುಗಳನ್ನು ಕಟ್ಟಿಸಿದರು. ಪ್ರತಿಯೊಂದು ಗ್ರಾಮದಲ್ಲೂ ಸಂತರ ಜಾತ್ರೆಗಳು ನಡೆಯುತ್ತವೆ. ಇಲ್ಲಿ ರೋಮನ್ ಕ್ಯಾತೊಲಿಕ್ ಮತ ಪ್ರಧಾನವಾಗಿದೆ. ಪ್ರಾಟೆಸ್ಟೆಂಟ್ ಮತವೂ ರೂಢಿಯಲ್ಲಿದೆ. ಇಂಡಿಯನರು ಹಿಂದಿನ ಮತೀಯ ಹಬ್ಬಗಳ ಜೊತೆಗೆ ಕ್ಯಾತೊಲಿಕ್ ಹಬ್ಬಗಳನ್ನೂ ಆಚರಿಸುತ್ತಾರೆ.	(ವಿ.ಜಿ.ಕೆ.)

ಭಾಷೆ: ಸ್ಪ್ಯಾನಿಷ್ ಮತ್ತು ಕೆಚುವೀ ಭಾಷೆಗಳು ಆಡಳಿತ ಭಾಷೆಗಳಾಗಿವೆ.

ಕೆಚುವಾ

`ಕೆಚುವಾ ಆಂಡಿಯನ್ ನೆಲದ ಭಾಷೆ, ಇಂದು ಈ ಭಾಷೆಯಲ್ಲಿ ಮಾತನಾಡುವ 1.3 ಕೋಟಿ ಜನರಿದ್ದಾರೆ. ಇನ್ಕಾಗಳ ಅಧಿಕೃತ ಭಾಷೆಯಾಗಿ ಮೆರೆದ ಕೆಚುವಾಗೆ ಶ್ರೀಮಂತ ಇತಿಹಾಸವಿದೆ. ಸ್ಪ್ಯಾನಿಷ್ ಆಕ್ರಮಣದಲ್ಲಿ ಕೆಚುವಾ ಭಾಷೆ ಬಹಳಷ್ಟು ಕಳೆದುಹೋಯಿತು. ಪುರಾತನ ದಕ್ಷಿಣ ಅಮೆರಿಕನ್ ಮೂಲವಾಸಿಗಳ ಈ ಭಾಷೆಗೆ ವರ್ಣಮಾಲೆಯ ಲಿಪಿ ವ್ಯವಸ್ಥೆ ಇರಲಿಲ್ಲ. ಎರಡು ಬಗೆಯ `ಜ್ಞಾಪಕ ಸಾಧನ ವ್ಯವಸ್ಥೆ (ನಿಮೊನಿಕ್ ಸಿಸ್ಟ್‍ಮ್) ವಿಕಾಸಗೊಂಡಿದ್ದವು. ಒಂದು `ಕ್ಹಿಪು ಎಂಬುದು ಹಗ್ಗ ಮತ್ತು ಗಂಟುಗಳನ್ನು ಒಳಗೊಂಡಿದ್ದು. ಗಂಟುಗಳನ್ನು ಹಾಕಿ ಲೆಕ್ಕ ಇಡುವ, ಆಡಳಿತದ ಅವರ್ಶಯಕತೆಗೆ ಬೇಕಾದ ದಾಖಲೆಗಳನ್ನು ಕಾದಿರಿಸುವ ವ್ಯವಸ್ಥೆ ಇದು. ಇನ್ನೊಂದು `ಟುಪಾಕು ಎಂಬ ವ್ಯವಸ್ಥೆಯಲ್ಲಿ ಚಿತ್ರಗಳಿದ್ದು, ಈ ಚಿತ್ರಗಳು ರಾಜ ಮನೆತನಗಳನ್ನು, ನಗರಗಳನ್ನು ಸಂಕೇತಿಸುತ್ತಿದ್ದವು. ಇನ್ಕಾ ರಾಜ ಮನೆತನದ ಜನರನ್ನು ಸಂಕೇತಿಸಲು ಕಸೂತಿ ಕೆಲಸ ಮಾಡಿದ `ಪೊಂಚಾಸ್ ಎಂಬ ಉಡುಪನ್ನು ತೊಟ್ಟಂತೆ ತೋರಿಸುತ್ತಿದ್ದರು. ಹದಿನಾರನೆ ಶತಮಾನದಲ್ಲಿ ಕೆಚುವಾ ಭಾಷೆಯನ್ನು ಧಾರ್ಮಿಕ ಸಂದರ್ಭಗಳಿಗೆ ಉಳಿಸಿಕೊಳ್ಳುವ ಯತ್ನವಾಗಿ ರೋಮನ್ ಅಕ್ಷರಮಾಲೆಯನ್ನು ಕೆಚುವಾ ಭಾಷೆಗೆ ಬಳಸಿದರು. ಬಲು ಬೇಗನೆ ಕೆಚುವಾ ಮೌಖಿಕ ಇತಿಹಾಸ, ಚರಿತ್ರೆ ಮತ್ತು ಸಾಹಿತ್ಯ ದಾಖಲಾಗತೊಡಗಿತು. ಇಂದು ಸ್ಪ್ಯನಿಷ್ ಭಾಷೆಯಲ್ಲೂ ಬಹಳಷ್ಟು ಕೆಚುವಾ ಪದಗಳು ಸೇರಿ ಹೋಗಿವೆ.

ಪ್ರಾಕ್ತನ: ಅಮೆಜಾನ್ ನದಿಯ ಬಯಲಿನಲ್ಲಿರುವ ಫಲವತ್ತಾದ ಭೂಮಿಯಲ್ಲಿ ಪ್ರಾಚೀನ ಮಾನವ ನೆಲೆಸಿದ್ದುದಕ್ಕೆ ಸಾಕ್ಷ್ಯಗಳು ಕಂಡುಬರುತ್ತವೆ. ಅತ್ಯಂತ ಪ್ರಾಚೀನ ಮಾನವನ ಅವಶೇಷಗಳು ಈ ಪ್ರದೇಶದಲ್ಲಿ ಕಣ್ಮರೆಯಾದ ಪ್ರಾಣಿಗಳ ಪಳೆಯುಳಿಕೆಗಳೊಂದಿಗೆ ಮತ್ತು ಶಿಲಾಯುಧಗಳೊಂದಿಗೆ ದೊರಕಿವೆ. ಇಂಗಾಲ ಕಾಲಗಣನ ಪದ್ಧತಿಯ ಪ್ರಕಾರ ಅವನ್ನು ಕ್ರಿ.ಪೂ. ಸುಮರು 7000 ಕ್ಕೆ ನಿರ್ದೇಶಿಸಲಾಗಿದೆ. ಆ ಜನರು ಉತ್ತರ ಅಮೆರಿಕದ ಅಲಾಸ್ಕಾ ಕಡೆಯಿಂದ ದೀರ್ಘ ಪ್ರಯಾಣದ ಅನಂತರ ಪೆರುವಿಗೆ ಬಂದಿರಬೇಕು. ಅವರು ಸಣ್ಣಪುಟ್ಟ ಗುಂಪುಗಳಲ್ಲಿ ವಾಸಿಸುತ್ತಿದ್ದರು. ಬೆಂಕಿಯ ಉಪಯೋಗ ತಿಳಿದಿದ್ದರು; ಚಕಮಕಿ ಕಲ್ಲಿನ ಚಾಕು, ಹರೆಯುವ ಆಯುಧ ಮತ್ತು ಭರ್ಜಿಗಳ ತುದಿಗೆ ಜೋಡಿಸುತ್ತಿದ್ದ ಚೂಪಾದ ಮೊನೆಗಳಂಥ ಆಯುಧಗಳು ಮತ್ತು ಮೂಳೆಯ ದಬ್ಬಳ ಮತ್ತು ಸೂಜಿಗಳನ್ನು ಉಪಯೋಗಿಸುತ್ತಿದ್ದರು. ಭರ್ಜಿ ಮತ್ತು ಈಟಿಗಳಿಂದ ಬೇಟೆಯಾಡುತ್ತಿದ್ದರು. ಅವರು ಅತಿಮಾನುಷ ಶಕ್ತಿ ಮತ್ತು ಮಾಯಮಾಟಗಳಲ್ಲಿ ನಂಬಿಕೆ ಹೊಂದಿದ್ದರು. ಮಂತ್ರವಾದಿಗಳು ಅವರ ಮುಂದಾಳಾಗಿರುತ್ತಿದ್ದರು. ರಜಸ್ವಲೆಯಾದ ಸ್ತ್ರೀಯರು ದುಷ್ಟಶಕ್ತಿಗಳ ಸಂಕೇತವೆಂದು ಭಾವಿಸಲಾಗುತ್ತಿತ್ತು.

	ಸಹಸ್ರಾರು ವóರ್ಷಗಳ ಕಾಲ ಈ ಸ್ಥಿತಿಯಲ್ಲಿ ಜಡವಾಗಿದ್ದ ಜನಜೀವನ ಕ್ರಮೇಣ ವ್ಯವಸಾಯಾಧಾರಿತ ಜೀವನದತ್ತ ಸರಿಯಿತು. ಕ್ರಿ. ಪೂ. ಸುಮಾರು 2500 ರ ವೇಳೆಗೆ ಪೆರುವಿನ ತೀರ ಪ್ರದೇಶಗಳಲ್ಲಿ ಇಂಥ ಪ್ರಾರಂಭಾವಸ್ಥೆಯಲ್ಲಿದ್ದ ವ್ಯವಸಾಯಿಕ ಪಂಗಡಗಳು ಚಿಕಮಾ ಕಣಿವೆಯಲ್ಲಿ ಕಾಣಿಸಿಕೊಂಡುವು. ಪುರಾತತ್ತ್ವಜ್ಞರು ಆ ಪ್ರದೇಶದ ಹುವಾಕಾ ಪ್ರೀಟಾ ಎಂಬ ನೆಲೆಯಲ್ಲಿ ನಡೆಸಿದ ಉತ್ಖನನಗಳಿಂದ ತಿಳಿದುಬಂದಿರುವಂತೆ, ಅವರೆಯಂಥ ದ್ವಿದಳಧಾನ್ಯ, ಸೋರೇಕಾಯಿ, ಕುಂಬಳ, ಕಾರಮೆಣಸು, ಹತ್ತಿ ಮುಂತಾದುವನ್ನು ಅವರು ಬೆಳೆಯುತ್ತಿದ್ದರು. ಮುಸುಕು ಜೋಳವಿನ್ನೂ ರೂಢಿಗೆ ಬಂದಿರಲಿಲ್ಲ. ಆದರೂ, ಅವರ ಆಹಾರ ಪದಾರ್ಥಗಳಲ್ಲಿ ಬಹುಪಾಲು ಸಮುದ್ರೋತ್ಪನ್ನಗಳಾಗಿದ್ದುವು. ನಾನಾ ಬಗೆಯ ಮೀನುಗಳನ್ನು ಸೀಲ್ ಪ್ರಾಣಿಗಳನ್ನು ಅವರು ಹಿಡಿದು ತಿನ್ನುತ್ತಿದ್ದರು. ಕಾಡು ಪ್ರಾಣಿಗಳ ಬೇಟೆ ಬಹಳ ಸೀಮಿತವಾಗಿತ್ತು. ಅವರಿಗೆ ಮಡಕೆ ಕುಡಿಕೆಗಳ ಬಳಕೆ ಗೊತ್ತಿರಲಿಲ್ಲ. ನೇಯ್ಗೆ ರೂಢಿಯಲ್ಲಿತ್ತು. ಈ ಜೀವನ ರೀತಿ ಕ್ರಿ. ಪೂ. ಸುಮಾರು 1300 ರ ವರೆಗೆ ಮುಂದುವರಿಯಿತು. ಜನಸಂಖ್ಯೆ ಹೆಚ್ಚಿದಂತೆ ಪೆರು ಪ್ರದೇಶದ ಜನರು ಹೆಚ್ಚುಹೆಚ್ಚಾಗಿ ವ್ಯವಸಾಯಾವಲಂಬಿಗಳಾದ ಸಂಗತಿ ವಿರು ಕಣಿವೆಯಲ್ಲಿರುವ ಗ್ವನಾಪೆಯ ಉತ್ಖನನಗಳು ತಿಳಿಸುತ್ತವೆ. ಕ್ರಿ. ಪೂ. ಸುಮಾರು 1250-840 ರ ಅವಧಿಯ ಆ ಸಂಸ್ಕøತಿ ಕಾಲದಲ್ಲಿ ಸುಟ್ಟ ಮಣ್ಣಿನ ಪಾತ್ರೆಯ ಉಪಯೋಗ ಮತ್ತು ಮುಸುಕಿನ ಜೋಳದ ಬೆಳೆ ಪ್ರಾಬಲ್ಯಕ್ಕೆ ಬಂದವು. 

	ಪೆರುವಿನ ಪ್ರಸಿದ್ಧ ನಾಗರಿಕತೆಗಳಲ್ಲಿ ಮೊದಲನೆಯದು ಉತ್ತರ ಪ್ರಸ್ಥಭೂಮಿಯ ಛವಿನ್ ಡಿ ಹುವನ್ ಟಾರ್ ಎಂಬಲ್ಲಿ ಅಸ್ತಿತ್ವಕ್ಕೆ ಬಂತು. ಅಲ್ಲಿ ಗಾರೆ ಗಚ್ಚುಗಳ ಬಳಕೆಯಿಲ್ಲದೆ ಕಲ್ಲಿನಲ್ಲಿ ಕಟ್ಟಿದ, ಹಲವು ಅಂತಸ್ತುಗಳಿದ್ದ ಮತ್ತು ಬೆಳಕಿನ ಕಿಂಡಿಗಳನ್ನು ಹೊಂದಿದ್ದ ಅನೇಕ ಕಟ್ಟಡಗಳು ನಿರ್ಮಿತವಾಗಿದ್ದುವು. ಆ ಕಾಲದಲ್ಲಿ ಕಲೆ ಬೆಳೆಯಿತು; ಅದರಲ್ಲಿ ಮಾಂಸಹಾರಿಯಾದ ಒಂದು ಜಾತಿಯ ಚಿರತೆಗೆ ಬಹಳ ಪ್ರಾಮುಖ್ಯ ದೊರಕಿತ್ತು. ಈ ಕಲೆಯ ಉತ್ತಮ ಕೃತಿಗಳನ್ನು ಚಿಕಮ ಕಣಿವೆಯಲ್ಲಿರುವ ಕ್ಯುಪಿಸಿನಿಕ್ ಎಂಬಲ್ಲಿ ಕಾಣಬಹುದು. ಅನೇಕ ವಿದ್ವಾಂಸರು ಈ ಕಲಾಶೈಲಿ ಧಾರ್ಮಿಕ ಸಂಕೇತವಾಗಿತ್ತೆಂದು ಭಾವಿಸಿದ್ದಾರೆ. ಈ ಕಾಲ ಕ್ರಿ. ಪೂ. ಸುಮಾರು 850-500 ಎಂದು ತಿಳಿಯಲಾಗಿದೆ. ಅನಂತರದ ಕಾಲದಲ್ಲಿ ಹಲವಾರು ಕ್ರಿಯಾತ್ಮಕವಾದ ಪ್ರೇರಕತಂತ್ರಗಳು ತಲೆದೋರಿದುವು. ಈ ಕಾಲವನ್ನು ಪ್ರಯೋಗಾತ್ಮಕ ಯುಗವೆಂದು ಕರೆಯಲಾಗಿದೆ. ಆಗ ಹಲವಾರು ಸಂಸ್ಕøತಿಗಳು ಹುಟ್ಟಿಕೊಂಡವೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಆಯಾ ಜನರು ಬಳಸುತ್ತಿದ್ದ ಮಣ್ಣಿನ ಪಾತ್ರೆಗಳ ಆಧಾರದ ಮೇಲೆ ಅವನ್ನು ಹೆಸರಿಸಲಾಗಿದೆ. ಉತ್ತರ ತೀರದ ಸಲಿನಾರ್ ಮತ್ತು ಗಲಿನಾಜೊ, ಮಧ್ಯ ತೀರ ಪ್ರದೇಶದಲ್ಲಿ ಛಂಕೆ, ದಕ್ಷಿಣ ತೀರ ಪ್ರದೇಶದಲ್ಲಿ ಪರಕಾಸ್, ಕೆವರ್ನಾಸ್ ಮತ್ತು ಒಕುಕಜೆ, ಉತ್ತರ ಪ್ರಸ್ಥಭೂಮಿಯಲ್ಲಿ ಹುವರಾಜ್, ಮಧ್ಯ ಪ್ರಸ್ಥಭೂಮಿಯಲ್ಲಿ ಚನಪಟ, ಮತ್ತು ದಕ್ಷಿಣದ ಪ್ರಸ್ಥ ಭೂಮಿಭಾಗದಲ್ಲಿ ಚಿರಿಪ - ಇವು ಈಗಿನ ಸಂಸ್ಕøತಿಗಳಲ್ಲಿ ಪ್ರಧಾನವಾದವು.

	ಈ ಪ್ರಾದೇಶಿಕ ಸಂಸ್ಕøತಿಗಳ ಕಾಲದಲ್ಲಿ ಹಂತಗಳಿಂದ ಕೂಡಿದ ಭೂಮಿಯಲ್ಲಿ ನೀರಾವರಿಯ ಸುಧಾರಿತ ವ್ಯವಸಾಯ ರೂಢಿಗೆ ಬಂತು; ಬೇಟೆಗಾರಿಕೆ ಮೀನುಗಾರಿಕೆ ಕ್ರಮೇಣ ಕ್ಷೀಣವಾಗತೊಡಗಿದುವು. ಹೊಸ ಬೆಳೆಗಳು ರೂಢಿಗೆ ಬಂದುವು. ಲಾಮ ಪ್ರಾಣಿಗಳನ್ನು ಮೇಯಿಸುವುದು, ಜನಪ್ರಿಯವಾಗಿತ್ತು. ಕೆಂಪಿನ ಮೇಲೆ ಬಿಳಿಯ ಬಣ್ಣದಿಂದ ಚಿತ್ರಿಸಿದ ಹೊರೆಸನ್ ಶೈಲಿಯ ಮಣ್ಣು ಪಾತ್ರೆಗಳು ಆ ಕಾಲದ ಗಮನಾರ್ಹ ಉತ್ಪನ್ನಗಳು. ಈ ಸಂಸ್ಕøತಿಗಳು ಹಲವು ಶತಮಾನಗಳ ಕಾಲ ಅಸ್ತಿತ್ತ್ವದಲ್ಲಿದ್ದುವು.

	ಕ್ರಿಸ್ತಶಕದ ಆರಂಭ ಕಾಲದಲ್ಲಿ ಪೆರು ತನ್ನ ಇತಿಹಾಸದಲ್ಲಿ ಸ್ವರ್ಣಯುಗವನ್ನು ಪ್ರವೇಶಿಸಿತೆಂದು ಹೇಳಲಾಗಿದೆ. ಆಗ ಅದು ಸಾಧಿಸಿದ ಔನತ್ಯದಲ್ಲಿ ಹಲವಾರು ಸಣ್ಣಪುಟ್ಟ ಬದಲಾವಣೆಗಳಾಗುತ್ತಿದ್ದರೂ ಮೂಲಭೂತವಾದ ಯಾವುದೇ ಮಾರ್ಪಾಟು ಕಾಣಬರಲಿಲ್ಲ. ಬಟ್ಟೆಗಳ ತಯಾರಿಕೆ ಮಡಕೆ ಕುಡಿಕೆ, ನಿರ್ಮಾಣ ಮತ್ತು ಲೋಹಗಾರಿಕೆಯ ಅದ್ಭುತ ಕೌಶಲ ಸಾಧಿಸಿದುವು. ವಾಸ್ತು ನಿರ್ಮಾಣ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಪ್ರಗತಿಯನ್ನು ಸಾಧಿಸಲಾಯಿತು. ಅಮೋಘವಾದ ಪಿರಮಿಡ್ಡುಗಳನ್ನು ನಿರ್ಮಿಸಲಾಯಿತು. ಮತೀಯ ಕ್ಷೇತ್ರಗಳಲ್ಲಿ ಅಸಾಧಾರಣ ಮುನ್ನಡೆ ಸಾಧಿಸಲಾಯಿತು. ಪ್ರಸ್ಥಭೂಮಿ ಪ್ರದೇಶಕ್ಕಿಂತ ಕರಾವಳಿ ಮುಂದಿತ್ತು. ಆಗಿನ ಸಂಸ್ಕøತಿಗಳಲ್ಲಿ ಉತ್ತರ ತೀತದ ಮೋಚೆ ಅಥವಾ ಮೋಚಿಕ ಮತ್ತು ದಕ್ಷಿಣ ತೀರದ ಪರಕಾಸ್ ಮತ್ತು ನಜ್ಕ ನಾಗರಿಕತೆಗಳು ಮುಖ್ಯವಾದವು. ಮೋಚಿಕ ಸಂಸ್ಕøತಿಯ ಜನರು ದೊಡ್ಡ ನೀರಾವರಿ ಕಾಲುವೆಗಳನ್ನು ನಿರ್ಮಿಸಿದ್ದರು ; ಅವುಗಳ ಪೈಕಿ ಒಂದು 136 ಕಿ.ಮೀ. ಉದ್ದವಿತ್ತು. ಸುಮಾರು 13,00,00,000 ಇಟ್ಟಿಗೆಗಳಿಂದ ಭಾರೀ ದೇವಾಲಯಗಳನ್ನು ಸೂರ್ಯ ಮತ್ತು ಚಂದ್ರರಿಗೆ ಕಟ್ಟಿದ್ದರು. ಅವರು ಪ್ರಕೃತಿ ಸಹಜ ಆಕಾರಗಳಲ್ಲಿ ಅನೇಕ ಮಣ್ಣಿನ ಪಾತ್ರೆಗಳನ್ನು ಸಹ ಮಾಡುತ್ತಿದ್ದರು. ಅವರ ಜನಜೀವನ ನಿರೂಪಣೆ, ಮಾನವನ, ಪ್ರಾಣಿಗಳ ಮತ್ತು ವಸ್ತುಗಳ ಪ್ರತಿಕೃತಿಗಳು ಅವರ ಸಂಸ್ಕøತಿಯನ್ನು ತಿಳಿಯಲು ಬಹಳ ಸಹಾಯಕವಾಗಿವೆ. ಅವರ ಮಣ್ಣಿನ ಪಾತ್ರೆಗಳ ಮೇಲೆ ಹಲವಾರು ಪ್ರಣಯ ದೃಶ್ಯಗಳು ರೂಪಿತವಾಗಿವೆ; ಅಂಥವು ಅಮೆರಿಕದ ಇಂಡಿಯನರ ಕಲೆಯಲ್ಲಿ ಅಪರೂಪ. ಆ ಜನರು ರಾಜಕೀಯ ಸಾಮಾಜಿಕ ಆರ್ಥಿಕ ಮತ್ತು ತಾಂತ್ರಿಕ ರಂಗಗಳಲ್ಲಿ ಬಹಳ ಪ್ರಗತಿ ಸಾಧಿಸಿದ್ದರು. ಐಶ್ವರ್ಯವಂತರ, ಉತಮ ಕುಲದವರ ಮತ್ತು ರೈತ, ಜೀತಗಾರ ಮತ್ತು ಗುಲಾಮರ ಬಣಗಳ ನಡುವೆ ಬಹಳ ಸಾಮಾಜಿಕ ಭೇದಗಳಿದ್ದವು. ಯುದ್ಧಗಳು ಸಾಮಾನ್ಯವಾಗಿದ್ದುವು. ಬಲ ಪ್ರಯೋಗದಿಂದ ಚಕ್ರಾಧಿಪತ್ಯಗಳನ್ನು ವಿಸ್ತರಿಸಲಾಗುತ್ತಿತ್ತು. ಯೋಧರ ಸುಟ್ಟ ಮಣ್ಣಿನ ಗೊಂಬೆಗಳು ಅಧಿಕ ಸಂಖ್ಯೆಗಳಲ್ಲಿ ಸಿಕ್ಕಿವೆ.

	ದಕ್ಷಿಣ ತೀರದಲ್ಲಿ ಪರಕಾಸ್ ಪರ್ಯಾಯ ದ್ವೀಪ ಪ್ರದೇಶದಲ್ಲಿ ಪಿಸ್ಕೊದ ದಕ್ಷಿಣಕ್ಕೆ ಪರಕಾಸ್ ಕೆವರ್ನಾಸ್ ಎಂದು ನಿರ್ದೇಶಿತವಾಗಿರುವ ಸುರಂಗ ಸಮಾಧಿಗಳಲ್ಲಿ (ಷಾಫ್ಟ್‍ಗ್ರೇವ್) ಮತ್ತು ನೆರೆಯ ಪರಕಾಸ್ ಸ್ಮಶಾನ ಭೂಮಿಯಲ್ಲಿ ಕೆಲವು ಗಮನಾರ್ಹ ಅವಶೇಷಗಳು ಸಿಕ್ಕಿವೆ. 1925 ಮತ್ತು 1927 ರ ಸಂಶೋಧನೆಗಳಿಂದ ಉಜ್ವಲವಾದ ಅಲಂಕೃತ ವಸ್ತ್ರಗಳು ಸುಸ್ಥಿತಿಯಲ್ಲಿ ದೊರಕಿವೆ. ಮೃತರ ಅವಶೇಷಗಳನ್ನು ಕಟ್ಟಲು ಬಳಸಿದ ಈ ವಸ್ತ್ರಗಳ ಸರಾಸರಿ 2.4 ಮೀ. ಉದ್ದ ಮತ್ತು 1.2 ಅಥವಾ 1.4 ಮೀ. ಅಗಲವಾಗಿವೆ. ಅವುಗಳ ಮೇಲೆ ಕಸೂತಿ ಕೆಲಸದಲ್ಲಿ ಸಣ್ಣ ಚಿತ್ರಗಳನ್ನು ಪುನರಾವರ್ತನೆ ಮಾಡಲಾಗಿದೆ. ಕಸೂತಿ ಕೆಲಸವಿಲ್ಲದ ಸರಳ ವಸ್ತ್ರಗಳು ಕೆಲಬಾರಿ 25ಘಿ4 ಮೀ.ಗಳಷ್ಟು ದೊಡ್ಡವಾಗಿರುತ್ತವೆ. 

	ಪರಕಾಸ್ ಪ್ರದೇಶದ ದಕ್ಷಿಣಕ್ಕೆ 160 ಕಿ.ಮೀ. ದೂರದಲ್ಲಿ ಸ್ವಲ್ಪ ಈಚಿನ ಕಾಲದ ನಜ್ಕ ಸಂಸ್ಕøತಿಯ ಕುರುಹುಗಳು ದೊರಕಿವೆ. ನಜ್ಖ ಮಡಕೆಗಳ ಮೇಲೆ ಪರಕಾಸ್ ವಸ್ತ್ರಗಳ ಮೇಲಿನ ಕೆಲವು ಪರಕೀಯ ವಿನ್ಯಾಸಗಳು ಇರುವುವಲ್ಲದೆ ನಜ್ಖ ಸಂಸ್ಕøತಿಯ ಅವಶೇಷಗಳು ಪೆರಕಾಸ್ ಸಂಸ್ಕøತಿ ಪದರಗಳ ಮೇಲೆ ಕಂಡುಬಂದಿವೆ. ಮೋಚಿಕ ಸಂಸ್ಕøತಿಯೊಂದಿಗೆ ಕೆಲವು ಸಾಮ್ಯಗಳಿದ್ದರೂ ಈ ಸಂಸ್ಕøತಿಯ ಜನರು ಬಹುಶಃ ಪ್ರಜಾತಂತ್ರವನ್ನು ಅನುಸರಿಸುತ್ತಿದ್ದುದಲ್ಲದೆ, ಅಷ್ಟಾಗಿ ಯುದ್ಧ ಪ್ರಿಯರಾಗಿರಲಿಲ್ಲ. ಭಾರೀ ತಾಂತ್ರಿಕ ನಿರ್ಮಾಣಗಳೂ ಅಸ್ತಿತ್ತ್ವದಲ್ಲಿರಲಿಲ್ಲ. ಅವರ ಸಮಾಧಿಗಳಲ್ಲಿ ಉತ್ತಮ ಕೌಶಲಪೂರ್ಣವಾದ. ಮನೋಹರ ವಿನ್ಯಾಸಗಳಿದ್ದ ವಸ್ತ್ರಗಳು ಮತ್ತು ಅಂದವಾದ ಮೃತ್ಪಾತ್ರೆಗಳು ದೊರಕಿವೆ. 

	ಮಧ್ಯ ತೀರ ಪ್ರದೇಶದ ಆಗಿನ ಸಂಸ್ಕøತಿಗಳು ಇವೆರಡರ ಮಧ್ಯವರ್ತಿಯಾಗಿದ್ದವು. ಗಜಮಾಕ್ರ್ವಿಲ್ಲ ನಗರ ಮತ್ತು ಪಚಕಾಮಕ್ ದೇವಾಲಯಗಳು ಆ ಕಾಲದಲ್ಲಿ ಪ್ರಾರಂಭವಾಗಿರಬಹುದು. ಅವನ್ನು ಹಸಿ ಇಟಿಗೆಗಳಿಂದ ನಿರ್ಮಿಸಲಾಗಿತ್ತು. ಉತ್ತರ ಪ್ರಸ್ತಭೂಮಿ ಪ್ರದೇಶದಲ್ಲಿ ಜಾವಿನ್ ಪದ್ಧತಿಯಂತೆ ಕಲ್ಲಿನಲ್ಲಿ ಕಟ್ಟಿಸಿದ 2 ಅಥವಾ 3 ಅಂತಸ್ತುಗಳ ಹಾಗು ಭೂ ಮಟ್ಟದಿಂದ ಕೆಳಗೆ ಕೊಡಿ ಮತ್ತು ಮೊಗಸಾಲೆಗಳಿದ್ದ ದೇವಾಲಯಗಳು ಮತ್ತು ಒರಟಾದ ದೊಡ್ಡ ಶಿಲಾ ಪ್ರತಿಮೆಗಳು ಅಸ್ತಿತ್ತ್ವದಲ್ಲಿದ್ದುವು. ಇವರ ಮೃತ್ಪಾತ್ರೆಗಳೂ ವಿಶಿಷ್ಟವಾಗಿದ್ದವು. ದಕ್ಷಿಣ ಭಾಗದಲ್ಲಿ ತನ್ನ ವಿಶಿಷ್ಟ ಉತ್ತಮ ಶಿಲಾಪ್ರತಿಮೆಗಳು ಮತ್ತು ಮಡಕೆಗಳಿಂದ ಕೂಡಿದ ಪುಕರನೆಲೆಯ ಸಂಸ್ಕøತಿ ಅನಂತರ ಕಾಲದ ತಿಯಾಹುವನಾಕೊ ಸಂಸ್ಕøತಿಯ ಮುನ್ಸೂಚಿಯಂತಿತ್ತು.

	ಈ ವಿಕಸನ ಯುಗದ ಸಂಸ್ಕøತಿಯನ್ನು ಕ್ರಿ. ಪೂ. 300 ರಿಂದ ಕ್ರಿ.ಶ. 500 ಅಥವಾ 1000 ರ ನಡುವಣ ಕಾಲಕ್ಕೆ ನಿರ್ದೇಶಿಸಲಾಗಿದೆ. 

	ತರುವಾಯದ ತಿಯಾಹುವನಾಕೊ ನೆಲೆಯಲ್ಲಿ ಗುರುತಿಸಲಾದ ವಿಸ್ತರಣ ಯುಗದ ಸಂಸ್ಕøತಿ ಅಮೆರಿಕದಲ್ಲಿ ಸುವಿಖ್ಯಾತವಾದುದು. ಸಮುದ್ರ ಮಟ್ಟದಿಂದ 3,962 ಮೀ ಎತ್ತರದ ಈ ಪ್ರದೇಶದಲ್ಲಿ ಅಲೂಗಡ್ಡೆ ಮತ್ತು ಇತರ ಬೆಳೆಗಳೂ ಲಾಮ ಮತ್ತು ಅಲ್ಪಾಕ ಮಂದೆಗಳೂ ಸಮೃದ್ಧವಾಗಿದ್ದುವು. ಸಾಲುಗಂಬಗಳು, ಸೋಪಾನದಿಬ್ಬಗಳು ಮತ್ತು ಕಟ್ಟಡಗಳ ಅಸ್ತಿಭಾರಗಳು. ಏಕಶಿಲಾ ಸ್ತಂಭಗಳಂಥ ಪ್ರಧಾನ ಸ್ಮಾರಕಗಳು 0-43 ಚ.ಕಿ.ಮೀ. ಪ್ರದೇಶದಲ್ಲಿ ನೆಲಸಿವೆ. ಒಂದೇ ಕಲ್ಲಿನಲ್ಲಿ ನಿರ್ಮಿಸಲಾದ ಹೆಬ್ಬಾಗಿಲಿನ ತೂಕ ಸುಮಾರು 10 ಟನ್ನುಗಳು. ಉಳಿದ ಕಟ್ಟಡ ಕಲ್ಲುಗಳ ತೂಕ 100 ಟನ್ನುಗಳು. ಕಲ್ಲಿನ ಕೆತ್ತನೆ ಕೆಲಸ ತನ್ನ ನಯಗಾರಿಕೆಯ ಮತ್ತು ಒಂದಕ್ಕೊಂದರ ಜೋಡಣೆ ದೃಷ್ಟಿಯಿಂದ ಶ್ಲಾಘನೀಯವಾಗಿದೆ. 7.2 ಮೀ ಎತ್ತರದ ಏಕಶಿಲಾಮೂರ್ತಿಯನ್ನೊಳಗೊಂಡಂತಿರುವ ಶಿಲಾ ವಿಗ್ರಹಗಳು ಗಮನಾರ್ಹ. ತಿಯಾಹುವನಾಕೊ ಸಂಸ್ಕøತಿಯ. ಅದರಲ್ಲೂ ಅದರ ಕಲಾಶೈಲಿಯ ಪ್ರಭಾವ ಪೆರು ದೇಶಾದ್ಯಂತ ಹರಡಿತ್ತು. ಅದನ್ನು ಕ್ಷಿತಿಜ ಶೈಲಿ (ಹೊರೈಸನ್ ಸ್ಟೈಲ್) ಎಂದು ಕರೆಯಲಾಗಿದೆ. ಈ ಸಂಸ್ಕøತಿ ಧಾರ್ಮಿಕ ಮೂಲದ್ದಾಗಿದ್ದು ಅದರೊಂದಿಗೆ ಕೆಲವು ರಾಜಕೀಯ ಸೂತ್ರಗಳು ಪ್ರಸಾರಗೊಂಡಿರಬಹುದು. ತಿಯಾಹುವನಾಕೊ ಒಂದು ಧಾರ್ಮಿಕ ಕ್ಷೇತ್ರವಾಗಿತ್ತು ; ಸಾಂಸ್ಕøತಿಕ ನೆಲೆಯಲ್ಲ. ಇದು 1000 ದಿಂದ 1300 ರ ವರೆಗೆ ಅಸ್ತಿತ್ತ್ವದಲ್ಲಿದ್ದಿರಬಹುದು. 

	ಪೆರು ಸಂಸ್ಕøತಿ ಈ ವೇಳೆಗೆ ತನ್ನ ಪರಮಾವಧಿಯನ್ನು ತಲುಪಿತ್ತು. ನೇಯ್ಗೆ, ಲೋಹಗಾರಿಕೆ ಮತ್ತು ಇತರ ಕಲೆಗಳಲ್ಲಿ ಪ್ರಾವೀಣ್ಯ ಸಾಧಿಸಿತ್ತು. ಬೇಸಾಯ ಮತ್ತು ಯಂತ್ರಶಾಸ್ತ್ರದಲ್ಲಿ ಪ್ರೌಢಿಮೆ ಪಡೆದಿತ್ತು. ಜನಸಂಖ್ಯೆ ಅಧಿಕವಾಗಿದ್ದು ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ನಿಬಿಡವಾಗಿತ್ತು. ಸಮಾಜದಲ್ಲಿ ಪ್ರತ್ಯೇಕ ಅಂತಸ್ತುಗಳೆರ್ಪಟ್ಟಿದ್ದುವು. ಸಣ್ಣ ಸಣ್ಣ ರಾಜ್ಯ ಘಟಕಗಳು ಹುಟ್ಟಿಕೊಂಡು ಕ್ರಮೇಣ ಯುದ್ಧಗಳಲ್ಲಿ ತೊಡಗಿ ಸಾಮ್ರಾಜ್ಯಗಳೂ ಹುಟ್ಟಿಕೊಂಡುವು.

	ಆಗಿನ ಪ್ರಸಿದ್ಧ ಜನಾಂಗಗಳಲ್ಲಿ ಉತ್ತರ ತೀರ ಪ್ರದೇಶದ ನದೀಬಯಲುಗಳನ್ನು ವಶದಲ್ಲಿಟ್ಟುಕೊಂಡಿದ್ದ ಚಿಮು ಜನರು ಪ್ರಮುಖರು. ಟ್ರುಜಿಲೊ ಬಳಿಯಿದ್ದ ಚನ್‍ಚನ್ ಅವರ ಮುಖ್ಯ ನಗರ. ಆ ನಗರದ ಅವಶೇಷಗಳು-ಹಸಿ ಇಟ್ಟಿಗೆಗಳಿಂದ ಕಟ್ಟಿದ ಎತ್ತರದ ಗೋಡೆಗಳು, ಜಲಾಶಯಗಳು, ಪಿರಮಿಡ್ಡುಗಳು, ದೇವಾಲಯಗಳು, ನೇರವೂ ಅಗಲವೂ ಆದ ರಸ್ತೆಗಳು. ಸುಮಾರು 205 ಚ.ಕಿ.ಮೀ. ವಿಸ್ತೀರ್ಣವಾಗಿವೆ. ಆದರೆ, ಅದರ ಕಲೆಗಾರಿಕೆ ರಾಶಿಗಟ್ಟಳೆ ತಯಾರಿಕೆಗೆ ಅನುಗೊಳಿಸಲಾದ ಸ್ಫೂರ್ತಿ ಶೂನ್ಯ ದುಡಿಮೆಯಂತಿದೆ. ಚಿಮು ಸಾಮ್ರಾಜ್ಯವನ್ನು 1470ರಲ್ಲಿ ಇಂಕ ಜನರು ಆಕ್ರಮಿಸಿ ಕೊನೆಗೊಳಿಸಿದರು. 

	ಪೆರುವಿನ ಇತಿಹಾಸದಲ್ಲಿ ಅತ್ಯುಚ್ಚಸ್ಥಾನ ಪಡೆದಿರುವರೆಂದರೆ ಇಂಕ ಸಾಮ್ರಾಜ್ಯದ ದೊರೆಗಳು. ಅವರು ಬಹುಶಃ 13 ನೆಯ ಶತಮಾನದ ಆದಿಯಲ್ಲಿ ತಲೆದೋರಿದರು. ಅವರ ಮೊದಲ ಎಂಟು ದೊರೆಗಳ ಹೆಸರುಗಳನ್ನು ಬಿಟ್ಟರೆ ಹೆಚ್ಚೇನೂ ಗೊತ್ತಿಲ್ಲ. ದಕ್ಷಿಣ ಅಮೆರಿಕದ ಜನತೆ ಯಾವ ರೀತಿಯ ಲಿಖಿತ ದಾಖಲೆಗಳನ್ನೂ ಬಿಟ್ಟಿಲ್ಲವಾದ್ದರಿಂದ 16ನೆಯ ಶತಮಾನದಲ್ಲಿ ಅಲ್ಲಿಗೆ ಬಂದ ಸ್ಪ್ಯಾನಿಷ್ ಆಕ್ರಮಣಕಾರರು ಬರೆದಿಟ್ಟ ಜನಜನಿತವಾದ ಹೇಳಿಕೆಗಳ ಆಧಾರದ ಮೇಲೆ ಅವರ ಇತಿಹಾಸದ ಪುನರ್ರಚನೆಯಾಗಬೇಕಾಗಿದೆ. ಮೊದಲೆರಡು ಶತಮಾನಗಳಲ್ಲಿ ಇಂಕ ಜನರು ಅಲ್ಲಿ ನೆಲೆಸಿದ್ದ ಅಸಂಖ್ಯಾತ ಸಣ್ಣ ಪಂಗಡಗಳಲ್ಲಿ ಒಂದಾಗಿದ್ದರು. ಅವರ ಕೇಂದ್ರ ಕುಜ್ಕೊ. ಅದರ ನೆರೆಯ ಪ್ರದೇಶಗಳನ್ನು ಅವರು ವಶಪಡಿಸಿಕೊಂಡಿದ್ದರು. ಆದರೆ, 1438ರಲ್ಲಿ ಪಚಕುಟಿ ಇಂಕ ಯುಪಾನ್‍ಖಿ ದೊರೆ ಅಧಿಕಾರಕ್ಕೆ ಬಂದೊಡನೆ ವಿಸ್ತರಣೆ ಕಾರ್ಯ ಆರಂಭವಾಯಿತು. ಅವನ ಮತ್ತು ಅವನ ಮಗ ತೋಪ ಇನ್‍ಕ ಯುಪಾನ್‍ಖಿಯ ಕಾಲದಲ್ಲಿ ಆಂಡೀಸ್ ಪರ್ವತ ಪ್ರದೇಶದ ಮತ್ತು ಎಕ್ವಡಾರಿನ ಕ್ವಿಟೋದಿಂದ ದಕ್ಷಿಣದಲ್ಲಿ ಚಿಲಿಯ ಸಾಂಟಿಯಾಗೋದವರೆಗಿನ ಇಡೀ ತೀರ ಪ್ರದೇಶವನ್ನು ಗೆದ್ದುಕೊಳ್ಳಲಾಯಿತು. ಅನಂತರ ಸಿಂಹಾಸನವನ್ನೇರಿದ ಹುವಾಯ್ನು ಕೆಪಾಕ್ (1493-1525) ಎಕ್ವಡಾರಿನಿಂದ ಈಗಿನ ಕೊಲಂಬಿಯಾದವರೆಗೆ ರಾಜ್ಯ ವಿಸ್ತರಣೆ ಮಾಡಿದ. ವಿಸ್ತಾರವಾದ ಈ ಸಾಮ್ರಾಜ್ಯ ಅವನ ಮಕ್ಕಳಾದ ಹುವಸ್ಕಾರ್ ಮತ್ತು ಆತಹುವಲ್ವ ಇವರ ಒಳಜಗಳದಿಂದ ಸುಲಭವಾಗಿ ಸ್ಪೇನಿನ ಪಿಜಾರ್ರೋನ ವಶವಾಯಿತು.

	ಆ ಇಂಕ ಸಾಮ್ರಾಜ್ಯ ಸಮತಾವಾದ, ರಾಜ ಪ್ರಭುತ್ವ ಮತ್ತು ಪುರೋಹಿತ ಪ್ರಭುತ್ವಗಳ ಅಸಾಧಾರಣ ಸಮ್ಮಿಲನವಾಗಿತ್ತು. ಇಡೀ ಬೇಸಾಯ ಯೋಗ್ಯ ಭೂಮಿಯನ್ನು ಸಾಮ್ರಾಟ್ ಧಾರ್ಮಿಕ ವ್ಯವಸ್ಥೆ ಮತ್ತು ಜನರಿಗೆ ಸೇರುವಂತೆ ಮೂರೂ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಅವಶ್ಯಕತೆ ಮತ್ತು ಗಾತ್ರಕ್ಕನುಗುಣವಾಗಿ ಭೂಮಿಯನ್ನು ಜನರಲ್ಲಿ ಹಂಚಲಾಗಿತ್ತು. ಬೇಸಾಯಗಾರರು ಎಲ್ಲ ಭೂಮಿಯನ್ನು ಸಾಮೂಹಿಕವಾಗಿ ವ್ಯವಸಾಯ ಮಾಡುತ್ತಿದ್ದರು. ಸಾರ್ವಜನಿಕ ಭೂಮಿಯ ಬೆಳೆಯನ್ನು ರಾಜ್ಯದ ಉಗ್ರಾಣಗಳಲ್ಲಿ ಪುರೋಹಿತರ ಶ್ರೀಮಂತರ ಅಧಿಕಾರಿಗಳ ಸೈನ್ಯದ ಮತ್ತು ಅನಾಥ ವೃದ್ಧರ ಬಳಕೆಗಾಗಿ ಸಂಗ್ರಹಿಸಲಾಗುತ್ತಿತ್ತು. ಉಳಿದಿದ್ದನ್ನು ತುರ್ತು ಸಂದರ್ಭಗಳಿಗಾಗಿ ಕಾದಿಡಲಾಗುತ್ತಿತ್ತು. ಪ್ರತಿ ಪ್ರಜೆಯೂ ರಾಜ್ಯಕ್ಕಾಗಿ ನಿಯಮಿತ ಶ್ರಮದಾನ ಮಾಡಬೇಕಾಗಿತ್ತು. ಶಕ್ತಿ ಪ್ರಜೆಗಳನ್ನು ಪ್ಯುರಿಕ್ ಎಂಬ ಗುಂಪುಗಳಾಗಿ ವಿಂಗಡಿಸಲಾಗಿತ್ತು. ಆಕರ್ಷಣೀಯರಾದ ಯುವಕ ಯುವತಿಯರನ್ನು ಆಯ್ದು, ಯುವತಿಯರಲ್ಲಿ ಕೆಲವರನ್ನು ಪುರೋಹಿತರ ಸೇವೆಗೆ ನೇಮಿಸಿ ಉಳಿದವರನ್ನು ಸಾರ್ವಜನಿಕ ವೇಶ್ಯಾ ವೃತ್ತಿಗೆ ಮೀಸಲಿಡುತ್ತಿದ್ದರು; ಯುವಕರನ್ನು ಸಾರ್ವಜನಿಕ ಕೆಲಸಗಳಿಗೆ ನೇಮಿಸುತ್ತಿದ್ದರು. ಆ ಸಮಾಜದ ಅಗ್ರಪಂಕ್ತಿಯಲ್ಲೆ ದೈವವಿಯಾಮಕನೆನಿಸಿದ ಚಕ್ರವರ್ತಿ, ತರುವಾಯ ರಾಜಮನೆತನದವರು, ಶ್ರೀಮಂತರು, ರಾಜ್ಯಾಧಿಕಾರಿಗಳು ಮತ್ತಿತರ ಸಣ್ಣ ಅಧಿಕಾರಿಗಳು ಇದ್ದರು. ಜನಸಾಮಾನ್ಯರನ್ನು ತಲಾ ಹತ್ತು ಜನರ ಗುಂಪುಗಳಾಗಿ ವಿಭಾಗಿಸಿ ಪ್ರತಿ ಗುಂಪಿಗೂ ಒಬ್ಬ ಮುಂದಾಳನ್ನು ನೇಮಿಸಲಾಗುತ್ತಿತ್ತು. ಜನಗಣತಿ ರೂಢಿಯಲ್ಲಿತ್ತು. ಗಲಭೆಕೋರರನ್ನು ಹೊರ ಪ್ರಾಂತ್ಯಗಳಿಗೆ ಸಾಗಿಸಿ ಅವರ ಸ್ಥಳದಲ್ಲಿ ಸಾಧು ಜನರನ್ನು ತಂದಿಡಲಾಗುತ್ತಿತ್ತು. ದೇಶಾದ್ಯಂತ ಉತ್ತಮ ರಸ್ತೆಗಳನ್ನು ಸೈನ್ಯ ಮತ್ತು ಸಂದೇಶ ವಾಹಕರ ಉಪಯೋಗಕ್ಕಾಗಿ ನಿರ್ಮಿಸಲಾಗಿತ್ತು. ದೊಡ್ಡ ಕಲ್ಲುಗಳನ್ನು ಬಳಸಿ ಸುಭದ್ರ ಕೋಟೆಗಳನ್ನು ನಿರ್ಮಿಸಲಾಗಿತ್ತು. ಪಿತೃಪೂಜನ ಪದ್ಧತಿ ಅವರಲ್ಲಿ ರೂಢಿಯಲ್ಲಿತ್ತು. ಸತ್ತವರ ದೇಹಗಳನ್ನು ಒಣಗಿಸಿ ಸಂರಕ್ಷಿಸಿಟ್ಟು ಆಗಾಗ್ಗೆ ಪೂಜಾದಿಗಳಿಗಾಗಿ ಹೊರತೆಗೆಯುತ್ತಿದ್ದರು. ಅಸಂಖ್ಯಾತ ಪುರೋಹಿತರ ವರ್ಗವಿತ್ತು. ಪಂಚಾಂಗಕ್ಕನುಸಾರವಾದ ವ್ರತಾಚರಣೆ ಅತಿಮಾನುಷ ದಿವ್ಯಜ್ಞಾನ, ಭವಿಷ್ಯವಾಣಿಯನ್ನು ಕೇಳುವುದು, ಯಾಗಾದಿಗಳ ಆಚರಣೆ, ಮಾಂತ್ರಿಕ ವೈದ್ಯ ಮುಂತಾದ ಪದ್ಧತಿಗಳಿಗೆ ಅವರು ಚಾಲಕರಾಗಿದ್ದರು. ನರಬಲಿ ಅಪರೂಪವಾದರೂ ಬಳಕೆಯಲ್ಲಿತ್ತು. ಸೂರ್ಯ ಅವರ ಪ್ರಧಾನ ದೇವತೆ, ಅಲ್ಲದೆ ಸೃಷ್ಟಿಕರ್ತ ವೀರ ಚೋಚ, ಪಚಕಾಮಕ್ ಮತ್ತಿತರ ಆದಿದೇವತೆಗಳಿದ್ದರು. ಪ್ರತಿ ಪ್ರಮುಖ ನಗರದಲ್ಲೂ ಸೂರ್ಯ ಮಂದಿರವಿತ್ತು. ಕಲೆ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅವರಲ್ಲಿ ಶಸ್ತ್ರ ವೈದ್ಯ ಅದರಲ್ಲೂ ತಲೆ ಬುರುಡೆಯನ್ನು ಕೊರೆದು ಮಿದುಳನ್ನು ಹೊರತೆಗೆದು ರಕ್ಷಿಸುವುದು ರೂಢಿಯಲ್ಲಿತ್ತು. ರೋಗಗಳಿಗೆ ಪಾಪ ಕಾರಣವೆಂದು ನಂಬಿದ್ದರು. 

	ಪೆರು ರೈತರು ಜಾಗತಿಕ ಆರ್ಥಿಕಾಭಿವೃದ್ಧಿಗೆ ಬಹಳ ಕೊಡುಗೆ ನೀಡಿದ್ದಾರೆ. ಆಲೂಗಡ್ಡೆ, ಮುಸುಕಿನ ಜೋಳ, ಗೆಣಸು, ತಿಂಗಳ ಹುರುಳಿ, ಕುಂಬಳ, ಸೋರೆ, ಖಾರಾಮೆಣಸು, ಹೊಗೆಸೊಪ್ಪು, ಮತ್ತಿತರ ಸಸ್ಯಗಳು ಇವರ ಕಾಣಿಕೆ. ಲೋಹ ಮತ್ತು ಸುಟ್ಟ ಮಣ್ಣಿನ ಅಪೂರ್ವ ಕಲಾವಸ್ತುಗಳನ್ನು ಅವರು ನಿರ್ಮಿಸಿದರು. ಅವರ ಸ್ತ್ರೀಯರು ಅಮೋಘವಾದ ಬಟ್ಟೆಗಳನ್ನು ನೇಯುತ್ತಿದ್ದರು. ಈ ರೀತಿ ಪ್ರಪಂಚದ ನಾಗರಿಕತೆಗೆ ಪೆರು ಸಂಸ್ಕøತಿಯ ಕಾಣಿಕೆ ಗಮನಾರ್ಹ. 						     (ಬಿ.ಕೆ.ಜಿ.)

ಇತಿಹಾಸ

	ಇಂಕ ಸಾಮ್ರಾಜ್ಯ: 16ನೆಯ ಶತಮಾನದಲ್ಲಿ ಸ್ಪ್ಯಾನಿಷರು ಬಂದಾಗ ದಕ್ಷಿಣ ಅಮೆರಿಕದ ಈಗಿನ ಪೆರು ಭಾಗ ಕೆಚ್ವಾ ಇಂಡಿಯನರ ಮಹಾ ನಾಗಿರಕತೆಯ ಕೇಂದ್ರವಾಗಿತ್ತು. ಈ ಜನ ಇಂಕ ಇಂಡಿಯನರೆಂದು ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ.

	ಕನಿಷ್ಠ ಪಕ್ಷ ಕ್ರಿ. ಪೂ. 8000 ದಿಂದಲಾದರೂ ಪೆರುವಿನಲ್ಲಿ ಮಾನವರು ಜೀವಿಸಿರಬೇಕೆಂದು ಹೇಳಬಹುದು. ಕ್ರಿ. ಪೂ. 1250ರಿಂದ ಇಲ್ಲಿ ಅನೇಕ ಮುಂದುವರಿದ ಸಂಸ್ಕøತಿಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದುವು. ಚಾವಿನ್, ಚಿಮು, ನಾಜ್ಕ, ಟೈಯಹ್ಯಾನಾಕೊ ಇವು ಪೆರುವಿನ ವಿವಿಧ ಭಾಗಗಳಲ್ಲಿದ್ದ ಕೆಲವು ಸಂಸ್ಕøತಿಗಳು. ಆದರೆ, ಕ್ರಿ. ಶ. 1438 ರ ವರೆಗೂ ಈ ಪ್ರದೇಶ ರಾಜಕೀಯವಾಗಿ ಒಂದಾಗಿರಲಿಲ್ಲ. ಆಗ ಇಂಕಗಳು ತಮ್ಮ ರಾಜಧಾನಿ ಕೂಸ್ಕೊದಿಂದ ಹೊರಟು ಸುತ್ತಣ ಪ್ರದೇಶವನ್ನೆಲ್ಲ ಗೆದ್ದರು. ಮುಂದಿನ ಐವತ್ತು ವರ್ಷಗಳಲ್ಲಿ ಪೆರು, ಬೊಲಿವಿಯ, ಎಕ್ವಡಾರ್, ಕೊಲಂಬಿಯ, ಚಿಲಿ, ಅರ್ಜೆಂಟೀನಗಳ ಬಹುಭಾಗ ಈ ಸಾಮ್ರಾಜ್ಯಕ್ಕೆ ಸೇರಿತು.
ಇನ್ಕಾಗಳು ಮತ್ತು ತಾತ್ರಿಕತೆ

	ಇನ್ಕಾಗಳಿಗೆ `ಚಕ್ರವೆಂದರೇನು ಎಂದು ಗೊತ್ತಿರಲಿಲ್ಲ. ಕಬ್ಬಿಣದ ಸಲಕರಣೆಗಳೂ ತಿಳಿದಿರಲಿಲ್ಲ. ಹೀಗಿದ್ದೂ ಇನ್ಕಾಗಳು ಬೃಹತ್ ದೇವಾಲಯಗಳನ್ನು, ಪರ್ವತದ ತುದಿಗಳಲ್ಲಿ ನಿಲ್ಲಿಸಿದರು. ಅವರಿಗೆ ಚಕ್ರ ಗೊತ್ತಿರಲಿಲ್ಲ ಎಂಬುದೇ ಬಲು ಅಚ್ಚರಿಯ ಚಿಷಯವಾಗಬಲ್ಲದು. ಭಾರತದ ಮೊಹೆಂಜೋದಾರೋ ನಗರೀಕತೆಯ ಕಾಲದ ಒಂದು ಅಟಿಕೆಯಲ್ಲಿ ಚಕ್ರಗಳಿರುವುದನ್ನು ಕಾಣುತ್ತೇವೆ, ಮೊಹೆಂಜೋದಾರೂ ಸುಮಾರು 3000 ವರ್ಷಗಳ ಹಿಂದಿನ ನಾಗರಿಕತೆ. ಇದಕ್ಕೂ ಹಿಂದಿನ ನಾಗರಿಕತೆಗಳೆಂದು ಕರೆಯಲಾಗುವ ಸುಮೇರಿಯನ್ ಹಾಗೂ ಅಸ್ಸೀರಿಯನ್ ನಾಗರಿಕತೆಗಳಲ್ಲಿಯೂ ಚಕ್ರದ ಉಪಯೋಗ ತಿಳಿದಿದ್ದಿತು. ಮುಖ್ಯವಾಗಿ ಉರುಳುವ ಸಾಧನವಾಗಿ ರೂಢಿಗೆ ಬಂದ ಚಕ್ರ ಮನುಷ್ಯನ ಹೊರೆಯನ್ನು ಎಲ್ಲ ಬಗೆಯಲ್ಲಿಯೂ ಹಗುರಾಗಿಸಿತು. ಆದರೆ ಐನೂರು ವರ್ಷಗಳ ಹಿಂದೆಯೂ ಇನ್ಕಾಗಳಿಗೆ ಚಕ್ರವೆಂದರೇನು ತಿಳಿದಿರಲಿಲ್ಲ. ಇನ್ಕಾಗಳು ಇಡೀ ಪರ್ವತಗಳನ್ನೇ ಕಡೆದು ಮೆಟ್ಟಿಲು ಮೆಟ್ಟಿಲು ಮಾಡಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಅವುಗಳಿಗೆ ನೀರು ಹಾಯಿಸುವ ರೀತಿ ಅದ್ಭುತ ಇಂಜಿನಿಯರಿಂಗ್ ಕೌಶಲವನ್ನುತೋರುತ್ತದೆ. ಹೊರಗಿನ ಯಾವ ಪ್ರಭಾವವಿಲ್ಲದೆ, ಕಾಲದಲ್ಲಿ ತಟಸ್ಥವಾಗಿ ಉಳಿದ ಈ ಜನ ತಮ್ಮ ಭೂಗೋಳದ ಕಠಿಣ ತೊಂದರೆಗಳನ್ನು ಎದುರಿಸಿ ಬದುಕಿಸಿದ್ದರು. ಅತ್ಯಂತ ಕಡಿದಾದ ಪರ್ವತಗಳಲ್ಲಿ ಮೈಲಿಯುದ್ದದ ರಾಂಪ್ ಮಾಡಿ ಅವುಗಳ ಮೂಲಕ ಬಂಡೆಗಳನ್ನು ಎತ್ತೊಯ್ದಿದ್ದರು. ಮೆಟ್ಟಿಲು ಕಡೆದಿದ್ದರು. ಕಿರಿದಾದ ಕಣಿವೆ, ಎತ್ತರದ ಪರ್ವತ ಶಿಖರಗಳ ಕಠಿಣ ಭೂಪ್ರದೇಶದಲ್ಲಿ ಬೃಹತ್ ದೇವಾಲಯಗಳನ್ನು ಕಟ್ಟಡಗಳನ್ನು ಕಟ್ಟಿದ್ದಲ್ಲದೆ, ಅವು ಭೂಕಂಪವನ್ನು ತಡೆಯುವಂತೆ ವಿನ್ಯಾಸ ಮಾಡಿದ್ದರು. ಇನ್ಕಾಗಳು ಗೋಡೆಗಳನ್ನು ಹತ್ತು-ಹದಿನೈದು ಡಿಗ್ರಿ ಕೋನದಲ್ಲಿ ನಿಲ್ಲಿಸಿರುವುದನ್ನು ಕಾಣಬಹುದಿದೆ. ಕಿಟಕಿ, ಬಾಗಿಲು ಎಲ್ಲವೂ `ಟ್ರಪೀಸಾಯ್ಡ್ ವಿನ್ಯಾಸದಲ್ಲಿದ್ದು ಇವಕ್ಕೆ ಭೂಕಂಪವನ್ನು ತಡೆಯುವ ಗುಣವಿತ್ತು.	
ಇನ್ಕಾ ಪೂರ್ವ ನಾಗರಿಕತೆ

	ಪೆರುವಿನ ಇನ್ಕಾ ನಾಗರಿಕತೆ ಅತ್ಯಂತ ಪ್ರಸಿದ್ಧವಾದದ್ದು. ಆದರೆ ಉತ್ತರ ಪೆರುವಿನ ಕ್ರಿ.ಪೂ. ಒಂದರಿಂದ ಕ್ರಿ.ಶ. ಎಂಟರವರೆಗೆ ಇದ್ದು ಮೆರೆದ `ಮೊಚಿಕಾ ನಾಗರಿಕತೆಯ ಬಗ್ಗೆ ಹೆಚ್ಚು ವಿವರಗಳು ತಿಳಿದು ಬಂದಿರಲಿಲ್ಲ. 1987ರಲ್ಲಿ ಘಟಿಸಿದ ಘಟನೆ ದಕ್ಷಿಣ ಅಮೆರಿಕದ ಸಾಂಸ್ಕøತಿಕ ಬೇರುಗಳನ್ನು ಅರ್ಥ ಮಾಡಕೊಳ್ಳುವತ್ತ ಬೆಳಕು ಚೆಲ್ಲಿತು. ಆ ವರ್ಷ ಕ್ರಿ.ಶ. 300ರ ಸುಮಾರಿಗೆ ಸೇರಿದ ಒಂದು ಗೋರಿಯನ್ನು ಲೀಮಾದಿಂದ ಉತ್ತರಕ್ಕೆ 800 ಕಿ.ಮೀ. ದೂರದಲ್ಲಿ ಕಂಡುಹಿಡಿಯಲಾಯಿತು. ಪುರಾತನ ನಾಗರಿಕತೆಯ ಮುಖಂಡನೊಬ್ಬನ ಗೋರಿಯದು. ಅದೇ `ಲಾರ್ಡ್ ಆಫ್ ಸೈಪನ್ ಗೋರಿ, ಅದ್ಭುತ ಕರಕುಶಲ ಕಲೆಗಳ ವಸ್ತುಗಳನ್ನು ಜೊತೆಯಲ್ಲಿ ಹೂಳಲಾಗಿದ್ದ ಈತನ ಗೋರಿ ತನ್ನೆಲ್ಲ ವೈಭವದೊಡನೆ ತೆರೆದುಕೊಂಡಿತ್ತು. ಈ ಗೋರಿಯಲ್ಲಿ ದೊರೆತ ಚಿನ್ನದ ಆಭರಣಗಳು, ಅಮೂಲ್ಯ ಹರಳುಗಳು, ಇದನ್ನು ಈಜಿಪ್ಟಿನ ಟುಟಕಮನ್ ಗೋರಿಗೆ ಹೋಲಿಸುವಂತೆ ಮಾಡಿದೆ. ಈ ಗೋರಿ ಮೊಚಿಕಾ ಜನರ ತಾಂತ್ರಿಕತೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರತಿಬಿಂಬವಾಗಿದೆ. ಈ `ಸೈಪನ್ ಯಜಮಾನನ ಗೋರಿಯಲ್ಲಿ, ಆತನ ಶವದೊಡನೆ, ಆತನ ಉಪಪತ್ನಿಯರನ್ನು, ಸೇವಕರನ್ನು, ನಾಯಿಯನ್ನೂ ಬಿಡದೆ ಕೊಂದು ಮಲಗಿಸಿದ್ದಾರೆ. ಶವಕ್ಕೆ ಹೊದಿಸಿರುವುದು ಚಿನ್ನದ ದಪ್ಪ ತಗಡಿನಲ್ಲಿ ನೀಲಿ ಕಲ್ಲುಗಳ ಅದ್ಭುತ ಅಲಂಕಾರವಿದೆ.
ಸ್ಪ್ಯಾನಿಷ್ ಆಕ್ರಮಣ

	`ಸುವರ್ಣ ಸಾಮ್ರಾಜ್ಯದ ಹುಡುಕಾಟದಲ್ಲಿ ಯೂರೋಪಿಯನ್ನರು ದಕ್ಷಿಣ ಅಮೆರಿಕದತ್ತ ದಂಡಯಾತ್ರೆ ಬಂದರು. ಇನ್ಕಾಗಳ ಸಾಮ್ರಾಜ್ಯವನ್ನು ಪ್ರವೇಶಿಸಿದ ಮೊಟ್ಟಮೊದಲ ಯೂರೋಪಿಯನ್, ಅಲೆಜೋ ಗಾರ್ಸಿಯಾ ಎಂಬ ಪೋರ್ಚುಗೀಸ್ ಮನುಷ್ಯ. ಆದರೆ ಸ್ಥಳೀಯ ಇಂಡಿಯನ್ನರು ಅಲೆಜೋನನ್ನು ಕೊಂದು ಹಾಕಿದರು. ಆದರೂ `ಎಲ್ ಡೊರಾಡೋ-ಚಿನ್ನದ ನಡಿನ ಆಕರ್ಷಣೆ, ಯೂರೋಪಿಯನ್ನರನ್ನು ಎಳೆತಂದಿತು. ಹೀಗೆ ಹುಡುಕಿ ಬಂದವರಲ್ಲಿ ಒಬ್ಬ, ಸ್ಪೇನ್ ದೇಶದ ಫ್ರಾನ್ಸಿಸ್ಕೋ ಪಿಜಾರೋ.

	ಫ್ರಾನ್ಸಿಸ್ಕೋ ಪಿಜಾರೋ 1471ರಲ್ಲಿ ಸ್ಪೇನ್ ದೇಶದಲ್ಲಿ ಹುಟ್ಟಿದ್ದ. ಗೊನ್ಜಾಲೋ ಪಿಜಾರೋ ಎಂಬುವನ ವಿವಾಹಬಾಹಿರ ಮಗನಾಗಿ ಜನಿಸಿದಪಿಜಾರೋ ಯಥೇಚ್ಛವಾಗಿ ಹಣ ಗಳಿಸಿ, ಸಮಾಜಿಕ ಪ್ರತಿಷ್ಠೆಯ ಏಣಿಯಲ್ಲಿ ಏರಲು ಬಯಸಿದ. ಅವನ ಬಾಲ್ಯವೆಲ್ಲ ಕಡು ಬಡತನದಲ್ಲಿಯೇ ಕಳೆದಿತ್ತು, ಪಿಜಾರೋ ಓದಲು ಬರೆಯಲು ಕಲಿತಿರಲಿಲ್ಲ. 1523ರಲ್ಲಿ ಪಿಸಾರೋ ದಕ್ಷಿಣ ಅಮೆರಿಕದ ಶ್ರೀಮಂತ ಸಾಮ್ರಾಜ್ಯದ ಬಗ್ಗೆ ಕೇಳಿದ. ಈ ನೆಲವನ್ನು ಗೆಲ್ಲಲು ದಂಡಯಾತ್ರೆ ಹೊರಟ. ಮೊದಲ ದಂಡಯಾತ್ರೆ ವಿಫಲವಾಯಿತು. 1530ರಲ್ಲಿ ಪಿಸಾರೋ ಪೂರ್ಣ ಸಿದ್ಧತೆಯೊಂದಿಗೆ ಬಂದಿಳಿದ. ಪೆರುವನ್ನು ಗೆಲ್ಲಲು ಸ್ಪೇನಿನ ದೊರೆಗಳ ಬೆಂಬಲ ಮತ್ತು ಅನುಮತಿಯನ್ನು ಪಡೆದು ಮೂರು ಹಡಗು, 200 ಜನ, 40 ಕುದುರೆಗಳೊಡನೆ ದಂಡೆತ್ತಿ ಬಂದಿದ್ದ. ಸಮುದ್ರ ತೀರದ ನಗರಗಳನ್ನು ಗೆದ್ದುಕೊಂಡು, ಒಳ ನುಗ್ಗಿದ.

	ಇನ್ಕಾ ಸಾಮ್ರಾಜ್ಯ ಬಲು ವಿಶಾಲವಿತ್ತು. ಇಂದಿನ ಪೆರು, ಈಕ್ವೇಡರ್, ಬೊಲಿವಿಯಾ, ಚಿಲಿಯನ್ನು ಆವರಿಸಿತ್ತು. ಕುಸ್ಕೋ ಅವರ ಸಾಮ್ರಾಜ್ಯದ ಕೇಂದ್ರಬಿಂದು. ಕೆಚುವಾ ಅವರ ಭಾಷೆ, ಈ ವಿಶಾಲ ಸಾಮ್ರಾಜ್ಯವನ್ನು ಇನ್ಕಾ ಆಳುತ್ತಿದ್ದ. ಇನ್ಕಾನನ್ನು ಸೂರ್ಯದೇವನ ನೇರ ವಂಶಜನೆಂದು ಪ್ರಜೆಗಳು ನಂಬಿದ್ದರು. `ಇನ್ಕಾ ಪಟ್ಟ ತಂದೆಯಿಂದ ಪಟ್ಟದರಾಣಿಯ ಹಿರಿಯ ಮಗನಿಗೆ ಬರುತ್ತಿತ್ತು. ಇನ್ಕಾ ದೊರೆಯಾಗಲು ಆತನಿಗೆ ಜ್ಞಾನ, ಧರ್ಮ, ಯುದ್ಧ ತಂತ್ರಜ್ಞಾನಗಳ ತರಪೇತು ನೀಡಲಾಗುತ್ತಿತ್ತು. ಆದರೆ ಶತಮಾನಗಳ ಕಾಲ ಸುಭದ್ರವಿದ್ದ ಇನ್ಕಾ ನಾಗರೀಕತೆಯಲ್ಲಿ, ಸ್ಪ್ಯಾನಿಷರ ಆಗಮನಕ್ಕೆ ಮೊದಲು ಬಿರುಕು ಕಂಡಿತ್ತು. ಹುಯಾನಾ ಕಪಾಕ್ ಎಂಬ ಇನ್ಕಾ, ತನ್ನ ಸಾಮ್ರಾಜ್ಯವನ್ನು ತನ್ನಿಬ್ಬರು ಗಂಡು ಮಕ್ಕಳ ನಡುವೆ ವಿಭಾಗ ಮಾಡಿ ಹಂಚಲು ಬಯಸಿದ್ದ. ಆದರೆ ಈ ಸೋದರರಿಬ್ಬರೂ ಹಂಚಿಕೊಳ್ಳಲು ಸಿದ್ಧವಿರಲಿಲ್ಲ. ಅತಹುಲ್ಪ ಮತ್ತು ಹುಸ್ಕಾರ್ ಇಬ್ಬರೂ ಸಮ್ರಾಜ್ಯವನ್ನು ಪಡೆಯಲು ಹವಣಿಸಿ, ಯಾದವೀ ಕಲಹಕ್ಕೆ ಕಾರಣರಾದರು. ಅತಹುಲ್ಪ ಗೆದ್ದು ಬಂದ, ಸಾಮ್ರಾಜ್ಯದ ಒಡೆತನ ಪಡೆದ. ಇಂತಹ ಸಂದರ್ಭದ ಲಾಭವನ್ನು ಸ್ಪ್ಯಾನಿಷರು ಸರಿಯಾಗಿಯೇ ಉಪಯೋಗಿಸಿಕೊಂಡರು. ಪಿಜಾರೋನ ಮೂಲ ಉದ್ದೇಶ ಸುಲಭದಲ್ಲಿ ಶ್ರೀಮಂತಿಕೆಯನ್ನು ಗಳಿಸುವುದು, ಚಿನ್ನದ ನಾಡನ್ನು ದೋಚುವುದು ಮತ್ತು ಈ ನೆಲದಲ್ಲಿ ಕ್ರಿಸ್ತ ಮತವನ್ನು ಸ್ಥಾಪಿಸುವುದಾಗಿತ್ತು.

	ಪೆರುವಿಗೆ ಬಂದಿಳಿದ ಪಿಸಾರೋಗೆ ಅಣ್ಣ ತಮ್ಮಂದಿರ ನಡುವಿನ ಕದನದ ಸುದ್ಧಿ ತಿಳಿದುಬಂದಿತು. ಅತಹುಲ್ಪ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಿದ. ಆತ ಕಾಜಮಾರ್ಕಾ ಎಂಬಲ್ಲಿದ್ದ. 1532ರಲ್ಲಿ ಪಿಜಾರೋ ಕಾಜಮಾರ್ಕಾ ನಗರವನ್ನು ತಲುಪಿದ. ಅತಹುಲ್ಪನನ್ನು ಮೋಸದಿಂದ ತನ್ನ ಡೇರೆಗೆ ಬರ ಹೇಳಿದ. ಅನುಮಾನಿಸದೆ ನಿಶಸ್ತ್ರನಾಗಿ ಬಂದ ಅತಹುಲ್ಪಾನನ್ನು ಸೆರೆ ಹಿಡಿದ. ಅವನ ಸೇನೆಗೆ `ತಮ್ಮ ರಾಜನನ್ನು ಬಿಡುಗಡೆ ಮಾಡಲು 22 ಅಡಿ ಅಗಲ, 17 ಅಡಿ ಉದ್ದದ ಕೋಣೆಯ ತುಂಬಾ ಚಿನ್ನವನ್ನು ತಂದು ತುಂಬಲು ಹೇಳಿದ. ಅವನ ಸೇನೆ ಅಷ್ಟೂ ಚಿನ್ನವನ್ನು ಹೊತ್ತು ತಂದು ತುಂಬಿತು. ಂನ್ನ ಪಡೆದುಕೊಂಡ ಮೇಲೂ ಪಿಜಾರೋ, ಇನ್ಕಾ ದೊರೆಯನ್ನು ಬಿಡುಗಡೆ ಮಾಡಲಿಲ್ಲ. ಅಷ್ಟು ಮುಗ್ಧವಾಗಿ ಪಿಜಾರೋನನ್ನು ನಂಬಿದ್ದಕ್ಕೆ ಅತಹುಲ್ಪ ಪಶ್ಚಾತ್ತಾಪ ಪಟ್ಟ. ಕಾಲ ಮಿಂಚಿ ಹೋಗಿತ್ತು. ಪಿಜಾರೋ ಅತಹುಲ್ಪನನ್ನು ಕ್ರಿಸ್ತ ಧರ್ಮಕ್ಕೆ ಪರಿವರ್ತಿಸಲು ಪ್ರಯತ್ನಿಸಿದ. ಅತಹುಲ್ಪ ವಿರೋಧಿಸಿದ. ಸ್ಪೇನ್ ದೇಶದ ರಾಜನಿಗೆ ಅಡಿಯಾಗಲು ಒಪ್ಪಲಿಲ್ಲ. ಪಿಜಾರೋ 2000 ಸ್ಥಳೀಯರನ್ನು ಕೊಲ್ಲಿಸಿದ. ಕ್ರಿಸ್ತ ಧರ್ಮಕ್ಕೆ ಪರಿವರ್ತನೆ ಆಗಲಿಲ್ಲವೆಂಬ ನೆಪ ಹಿಡಿದು ಅತಹುಲ್ಪನನ್ನು ಮರಣದಂಡನೆಯ ತಾಣಕ್ಕೆ ಕೊಂಡೊಯ್ಯುತ್ತಿದ್ದಂತೆ, ತನ್ನ ಜೀವ ಉಳಿಸಿಕೊಳ್ಳಲು ಅತಹುಲ್ಪ `ಬ್ಯಾಪ್ಟೈಸ್ ಮಾಡಿಸಿಕೊಳ್ಳಲು ಒಪ್ಪಿದ. ಇನ್ಕಾ ಸಾಮ್ರಾಟ ಅತಹುಲ್ಪನಿಗೆ ಕ್ರಿಸ್ತ ಧರ್ಮದ ದೀಕ್ಷೆ ಕೊಟ್ಟು, ಕುಸ್ಕೋ ನಗರದ ಮುಖ್ಯ ಚೌಕದಲ್ಲಿ ಅವನ ಕತ್ತು ಹಿಚುಕಿಸಿ ಕೊಂದರು.

	ಅತಹುಲ್ಪನ ಸಾವಿನೊಡನೆ ಇನ್ಕಾ ನಾಗರೀಕತೆ ಅವನತಿಗೆ ಇಳಿಯಿತು. ಪೆರು ಯೂರೋಪಿನ ಒಡೆತನದ ಅಡಿಯಾಳಾಯಿತು. ಪಿಜಾರೋ ಅತಹುಲ್ಪನ ಸೋದರನನ್ನು ಕೈಗೊಂಬೆಯ ರಾಜನಾಗಿ ಕೂರಿಸಿದ. ಅನಿರೀಕ್ಷಿತ ಸಾವು ಅವನಿಗೂ ಕಾದಿತ್ತು. ಮತ್ತೊಬ್ಬ ಸೋದರ ಮಾನ್ಕೋ ಕಪಾಕನನ್ನು ಕರಪುತಲಿಯಂತೆ ಕೂಡಿಸಿದ್ದಾಯಿತು. ಸಾಮ್ರಾಜ್ಯ ತುಂಡು ತುಂಡಾಯಿತು. ಹಿಂದೆಂದೂ ಇನ್ಕಾಗಳ ನೆಲದಲ್ಲಿ ಬರಗಾಲದ ಅನುಭವವಾಗಿರಲಿಲ್ಲ. ಇದೀಗ ಬರಗಾಲ ಬಡಿಯಿತು. ಯೂರೋಪಿಯನ್ನರು ತಮ್ಮೊಡನೆ ಯಥೇಚ್ಛವಾಗಿ ರೋಗರುಜಿನಗಳನ್ನೂ ತಂದಿದ್ದರು.

	1536ರಲ್ಲಿ ಮಾಂಕೋ ಕಪಾಕ್ ಆಕ್ರಮಣಕಾರಿಗಳ ವಿರುದ್ಧ ಸೈನ್ಯ ಕಟ್ಟಿ ನಿಂತ, ಕಡೆಗೂ ದಕ್ಷಿಣ ಅಮೆರಿಕದಲ್ಲಿ ಸ್ಪೇನ್ ವಿರುದ್ಧ ಹೋರಾಟ ಆರಂಭವಾಯಿತು. ತಮ್ಮ ಪವಿತ್ರ ನಗರ ಕುಸ್ಕೋವನ್ನು ಆಕ್ರಮಿಸಿದ್ದ ಸ್ಪ್ಯಾನಿಷರ ಮೇಲೆ ಕೆಂಪಗೆ ಕಾದ ಕಲ್ಲುಗಳನ್ನು ಕವಣೆಯಿಂದ ತೂರಿ ಎಸೆದರು. ಕುಸ್ಕೋ ಹತ್ತಿ ಉರಿಯಿತು. ಆದರೆ ಆಕ್ರಮಣಕಾರಿಗಳ ಬಳಿ ಯೂರೋಪಿನ ಆಧುನಿಕ ಶಸ್ತ್ರಗಳಿದ್ದವು. ಕೇವಲ 200 ಮಂದಿ ಇದ್ದ ಸ್ಪ್ಯಾನಿಷರು, ಮಾಂಕೋ ಕಪಾಕನ ಸಾವಿರ ಸಾವಿರ ಸಂಖ್ಯೆಯ ಸೇನೆಯನ್ನು ಬಡಿದು ಹಾಕಿದರು. ಮಾಂಕೋ ಕಪಾಕ್, ಓಲಂತಾಯತೊಂಬಾಗೆ ಓಡಿದ. ಅಲ್ಲಿಗೂ ಸ್ಪ್ಯಾನಿಷ್ ಸೇನೆ ಅಟ್ಟಿ ಬಂದಾಗ, ಸುಲಭವಾಗಿ ತಲುಪಲಾಗದ ಆಂಡೀಸ್ ಪರ್ವತಗಳ ಕಡಿದಾದ ತಾಣದ `ವಿಲ್ಕಬಾಂಬ ಎಂಬಲ್ಲಿಗೆ ಓಡಿದ. ಈ ಸ್ಥಳದಿಂದಲೇ ಆಕ್ರಮಣಕಾರಿಗಳ ವಿರುದ್ಧ ಆತನ ಹೋರಾಟ ಮುಂದುವರೆಯಿತು. ದಕ್ಷಿಣ ಪೆರುವಿನಲ್ಲೆಲ್ಲೂ ಸ್ಪ್ಯಾನಿಷರು ನೆಮ್ಮದಿಯಾಗಿ ತಳವೂರದಂತೆ ತನ್ನ ಹೋರಾಟ ಮುಂದುವರೆಸಿದ. ಸ್ಪ್ಯಾನಿಷರ ನಡುವೆಯೇ ಯಾದವೀ ಕಲಹ ಆರಂಭವಾದಾಗ, ಮಾಂಕೋ ಕಪಾಕ್, ಪಿಜಾರೋಗೆ ವಿರುದ್ಧವಾಗಿ ಆಲ್ಮಾಗ್ರೋ, ಎಂಬುವನ ಪರ ವಹಿಸಿದ. ಪಿಜಾರೋ ತಂಡದಿಂದ ಸೋತ ಆಲ್ಮಾಗ್ರೋ, ವಿಲ್ಕಬಾಂಬ ಕಣಿವೆಗೆ ರಕ್ಷಣೆಗೆಂದು ಓಡಿಬಂದ. ಆತನಿಗೆ ಎರಡು ವರ್ಷ ಆಶ್ರಯ ಕೊಟ್ಟ ಮಾಂಕೋ ಕಪಾಕನನ್ನೇ ಮೋಸದಿಂದ ಇರಿದು ಕೊಂದ. ಆದರೆ ಮಾಂಕೋ ಕಪಾಕನ ನಿಜವಾದ ಉತ್ತರಾಧಿಕಾರಿಯಾದ ಟುಪಾಕ್ ಅಮರು ಇನ್ಕಾ ದೊರೆಯಾಗಿ ಮೇಲೆದ್ದ. ಈತ ವಿಲ್ಕಬಾಂಬಾದ ಧಾರ್ಮಿಕ ವಿಶ್ವವಿದ್ಯಾಲಯದಲ್ಲಿ ಬೆಳೆದವ, ಟುಪಾಕ್ ಕ್ರಿಸ್ತ ಧರ್ಮಕ್ಕೆ ಪರಿವರ್ತಿಸುವುದನ್ನೂ, ಸ್ಪ್ಯಾನಿಷರನ್ನು ತೀವ್ರವಾಗಿ ವಿರೋಧಿಸಿದ. 1572ರಲ್ಲಿ ಹೊಸದಾಗಿ ಬಂದ ವೈಸ್‍ರಾಯ್ ಫ್ರಾನ್ಸಿಸ್ಕೋ ಡೆ ತೊಲೆದೋ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ವಿಲ್ಕಬಾಂಬ ಮೇಲೆ ಆಕ್ರಮಣ ಮಾಡಿದ. ಸ್ಥಳೀಯರು ಬಿಲ್ಲು, ಬಾಣ, ಭಲ್ಲೆ ಹಿಡಿದು ಸ್ಪ್ಯಾನಿಷರ ಮದ್ದು ಗುಂಡು, ಬಂದೂಕು, ತ8ಊಪಾಕಿಗಳನ್ನು ಎದುರಿಸಿ ವೀರಾವೇಷದಿಂದ ಹೋರಾಡಿದರು. ಕಟ್ಟ ಕಡೆಯ ಸ್ವತಂತ್ರ ಇನ್ಕಾ ನಗರ ವಿಲ್ಕಬಾಂಬಾ ಕೂಡಾ ಸ್ಪ್ಯಾನಿಷರ ಕೈವಶವಾಯಿತು. ನಗರವನ್ನು ಧ್ವಂಸಮಾಡಿ ಬೆಂಕಿ ಹಚ್ಚಿದರು. ದಟ್ಟ ಕಾಡಿನಲ್ಲಿ ತಪ್ಪಿಸಿಕೊಂಡು ಹೋದ ಟುಪಾಕನನ್ನು, ತುಂಬು ಗರ್ಭಿಣಿ ಪತ್ನಿಯೊಡನೆ ಹಿಡಿದು ಕುಸ್ಕೋಗೆ ಎಳೆತಂದರು. ಜೈಲಿನಲ್ಲಿ ಟುಪಾಕೋವನ್ನು ಕ್ರಿಸ್ತ ಧರ್ಮಕ್ಕೆ ಪರಿವರ್ತಿಸುವ ಪ್ರಯತ್ನ ನಡೆಯಿತು. ಕುಸ್ಕೋದ ಅದೇ ಮುಖ್ಯ ಚೌಕದಲ್ಲಿ, ಅವನ ತಲೆ ಕಡಿಯಲಾಯಿತು.

	ಉಳಿದ ಇನ್ಕಾ ವಂಶಜರನ್ನು, ಟುಪಾಕನ ಮೂರು ವರ್ಷದ ಮಗನನ್ನೂ ಸೇರಿಸಿ ದೇಶದಿಂದ ಉಚ್ಛಾಟಿಸಲಾಯಿತು. ತೊಲೆದೊ ಪೆರುವನ್ನು ಹಿಂದೆಂದೂ ಕಂಡಿರದಷ್ಟು ಕ್ರೂರ ರೀತಿಯಲ್ಲಿ ಆಳಿದ. ದೊಡ್ಡ ಕಾನೂನಿನ ಹೊತ್ತಿಗೆಯನ್ನು ಬರೆದ. ಇಂಡಿಯನ್ನರು ಸೂರ್ಯ, ಚಂದ್ರ, ಪಕ್ಷಿ, ಸರ್ಪ, ನದಿಯ ಹೆಸರನ್ನೊಳಗೊಂಡ ತಮ್ಮ ಮೂಲ ಹೆಸರುಗಳನ್ನು ಬಳಸಬಾರದೆಂದು ವಿಧಿಸಿದ. ಅವರ ಧರ್ಮವನ್ನು ಇನ್ನಿಲ್ಲದಂತೆ ಹತ್ತಿಕ್ಕಿದ.

	ಟುಪಾಕನ ಮರಿ ಮೊಮ್ಮಗ ಎರಡನೇ ಟುಪಾಕ್ ಅಮರು, 1780ರಲ್ಲಿ ಸ್ಪ್ಯಾನಿಷರ ವಿರುದ್ಧ ಸುವ್ಯವಸ್ಥಿತ ಬಂಡಾಯವನ್ನು ಯೋಜಿಸಿದ. ಈತ ಸ್ಪ್ಯಾನಿಷ್ ಅಧಿಕಾರಿಯನ್ನು ಬಂಧಿಸಿ, ನವೆಂಬರ್ 16ರಂದು ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ. ಗುಲಾಮ ಪದ್ಧತಿಯನ್ನು ವಿರೋಧಿಸಿದ ಮೊಟ್ಟ ಮೊದಲ ಪೆರುವಿನ ಶಾಸನಕ್ಕೆ ಸಹಿ ಹಾಕಿದ. `ಎಲ್ಲ ಗುಲಾಮರೂ ಸ್ವತಂತ್ರರು, ಎಂದು ಸಾರಿದ. ಆದರೆ 1781ರಲ್ಲಿ ಟುಪಾಕಗೆ ದ್ರೋಹ ಬಗೆಯಲಾಯಿತು. ಆತನನ್ನು ಹಿಡಿದು ಬಂಧಿಸಿ, ಆತನೆದುರೇ ಪತ್ನಿ ಮತ್ತು ಮಕ್ಕಳ ಹತ್ಯೆ ಮಾಡಿದರು. ಗುಲಾಮರ ಬಿಡುಗಡೆಗೆ, ಈ ನೆಲದ ಬಿಡುಗಡೆಗೆ ಸ್ಪ್ಯಾನಿಷರ ವಿರುದ್ಧ ಹೋರಾಡಿದ ಟುಪಾಕನನ್ನು ತುಂಡು ತುಂಡಾಗಿ ಕತ್ತರಿಸಿ ಊನ ಮಾಡಿ, ಕೊನೆಗೆ ಕುಸ್ಕೋದ ಮುಖ್ಯ ಚೌಕಕ್ಕೆ ಎಳೆತಂದು ತಲೆ ಕಡಿದರು.

	ಟುಪಾಕುವಿನ ಸಾವಿನೊಡನೆ ಬಂಡಾಯ ಸಾಯಲಿಲ್ಲ, ಆತನ ಸಂಬಂಧಿ ಡೀಗೋ ಟುಪಾಕ್ ಅಮರು ಮುಂದಾಳಾದ. ಆದರೆ ಆತನನ್ನು 1783ರಲ್ಲಿ ಆತನನ್ನು ಕೊಂದು, ಬಂಡಾಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು. ಇನ್ಕಾಗಳ ವಂಶಜರನ್ನು ಹುಡುಕಿ ಹುಡುಕಿ ಕೊಂದರು. ಸುಮಾರು 90 ಜನರನ್ನು ಸ್ಪೇನಿನ ಜೈಲಿಗೆ ರವಾನಿಸಿದರು. ಅಲ್ಲಿ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸತ್ತರು. ಇನ್ಕಾಗಳನ್ನು ಸಂಪೂರ್ಣವಾಗಿ ನಾಶ ಮಾಡಿ, `ಚಿನ್ನದ ನಾಡಿ'ನಲ್ಲಿ ಯೂರೋಪಿಯನ್ನರು ತಳವೂರಿದರು. ಪೆರುವಿನಲ್ಲಿ ರಕ್ತದ ನದಿ ಹರಿಸಿ, ಸ್ಪೇನ್ ದೇಶಕ್ಕೆ ಹೊನ್ನಿನ ಹೊಳೆಯೇ ಹರಿದು ಹೋಯಿತು. ಸ್ಪೇನಿಷರು ಆಕ್ರಮಿಸಿದ ಸಮಯದಲ್ಲಿ, `ಹೊಸ ಜಗತ್ತಿನಲ್ಲೆಲ್ಲ ಇನ್ಕಾಗಳ ಸಾಮ್ರಾಜ್ಯ ಅತಿ ದೊಡ್ಡದಿತ್ತು. ಪಿಜಾರೋ ಮೋಸದಿಂದ ಇನ್ಕಾ ದೊರೆಯನ್ನು ಹಿಡಿಯುವವರೆಗೆ, ಈ ಪುರಾತನ ಆಂಡಿಯನ್ ಜಗತ್ತಿಗೂ, ಯೂರೋಪಿಗೂ ಅತ್ಯಲ್ಪ ಸಂಪರ್ಕವಿತ್ತು. ಯೂರೋಪಿಯನ್ನರು ಈ ನೆಲಕ್ಕೆ ಕಾಲಿಟ್ಟೊಡನೆ, ನೂರಾರು ವರ್ಷಗಳ ಪುರಾತನ ನಾಗರಿಕತೆ, ಧರ್ಮ, ಸಂಸ್ಕøತಿ ಎಲ್ಲವನ್ನೂ ಕೇವಲ ಕೆಲವೇ ವರ್ಷಗಳಲ್ಲಿ ಸರ್ವನಾಶ ಮಾಡಿದರು.

	ಆ ಸಮಯದಲ್ಲಿ ದಕ್ಷಿಣ ಅಮೆರಿಕದಲ್ಲಿದ್ದ ಇಂಡಿಯನ್ನರ ಸಂಖ್ಯೆ ನೂರು ಮಿಲಿಯನ್. 1561ರ ಹೊತ್ತಿಗೆ ಸ್ಥಳೀಯರ ಸಂಖ್ಯೆ ಶೇಕಡಾ 75ರಷ್ಟು ನಶಿಸಿ ಹೋಗಿತ್ತು. ಆಕ್ರಮಣಕಾರಿಗಳ ಗುಂಡಿಗೆ ಬಲಿಯಾದವರು. ಗಣಿಗಳಲ್ಲಿ ಗುಲಾಮರಾಗಿ ದುಡಿದು ಮಾಡಿದವರು ಲಕ್ಷ ಲಕ್ಷ ಜನರಿದ್ದರು. ಜೊತೆಗೆ ಯೂರೋಪಿಯನ್ನರು ಹೊತ್ತು ತಂದ ಸಿಡುಬು, ದಡಾರ, ಸಾಂಕ್ರಾಮಿಕ ರೋಗಗಳಿಂದ ಮತ್ತಷ್ಟು ಜನ ಸತ್ತರು. ಯೂರೋಪಿಯನ್ನರ ಆಗಮನವಾದ ನೂರು ವರ್ಷಗಳಲ್ಲಿ ಸ್ಥಳೀಯರ ಸಂಖ್ಯೆ ಹನ್ನೆರಡು ಮಿಲಿಯನ್‍ಗೆ ಇಳಿದು ಹೋಯಿತು. ಇದೇ ನೂರು ವರ್ಷಗಳಲ್ಲಿ 200 ಟನ್ನಗಳಷ್ಟು ಚಿನ್ನ ಇಲ್ಲಿಂದ ಯೂರೋಪಿನ ಭಂಡಾರಕ್ಕೆ ಹರಿದು ಹೋಯಿತು. ಸ್ಪ್ಯಾನಿಷರು ನಿಜಕ್ಕೂ `ಚಿನ್ನದ ನಾಡನ್ನೇ ಕಂಡು ಹಿಡಿದಿದ್ದರು. ಇನ್ಕಾಗಳ ಭವ್ಯ ದೇಗುಲಗಳಲ್ಲಿಯ ಚಿನ್ನದ ಆಭರಣಗಳನ್ನು, ಮೂರ್ತಿಗಳನ್ನು, ಪೂಜಾ ಪಾತ್ರೆಗಳನ್ನೆಲ್ಲ ಕರಗಿಸಿ, ಚಿನ್ನದ ಗಟ್ಟಿಗಳಾಗಿಸಿ ಲಾಮಾಗಳ ಮೇಲೆ ಹೇರಿಕೊಂಡು ಸಮುದ್ರ ತೀರವನ್ನು ತಲುಪಿ, ಅಲ್ಲಿಂದ ಯೂರೋಪಿಗೆ ಸಾಗಿಸಿದರು. ಪೆರುವಿನಿಂದ ಯೂರೋಪಿಗೆ `ಚಿನ್ನದ ನದಿಯೇ ಹರಿಯಿತು.

ಸ್ವಾತಂತ್ರ್ಯ: ಪೆರು ಬಹಳ ಹಿಂದೆ ಸ್ಥಾಪಿತವಾದ ಸ್ಪ್ಯಾನಿಷ್ ವಸಾಹತಾಗಿದ್ದದರಿಂದ ಸ್ಪೇನ್ ದೊರೆಗೆ ನಿಷ್ಠರಾದ ಪ್ರಜೆಗಳು ಇತರ ವಸಾಹತುಗಳಿಗಿಂತ ಇಲ್ಲಿ ಹೆಚ್ಚಾಗಿದ್ದರು. ಸ್ಪೇನಿನ ವಿರುದ್ಧ ಸ್ವಾತಂತ್ರ್ಯ ಚಳವಳಿ ನಡೆದ ಕಾಲದಲ್ಲಿ ಪ್ರಧಾನ ನಾಯಕರು ಟೋಸ್ ದೆ ಸಾನ್ ಮಾರ್ಟಿನ್ ಹಾಗೂ ಸಿಮಾನ್ ಬೊಲೀವಾರ್, ಸಾನ್ ಮಾರ್ಡಿನ್ ಸ್ಪೇನಿನ ಸೈನಯವನ್ನು ಚಿಲಿ ಪ್ರದೇಶದಲ್ಲಿ ಸೋಲಿಸಿ ಸ್ಪೇನಿನ ಅಧಿಕಾರವನ್ನು ದಮನ ಮಾಡಲು 1820ರಲ್ಲಿ ಪೆರು ರಾಜ್ಯಕ್ಕೆ ಬಂದ. ಲೀಮಾದಲ್ಲಿದ್ದ ವೈಸ್‍ರಾಯನೂ ಅವನ ಸೈನಿಕರೂ ನಗರವನ್ನು ತ್ಯಜಿಸಿದರು. ಮಾರ್ಟಿನ್ ಆ ಪಟ್ಟಣವನ್ನು ಆಕ್ರಮಿಸಿಕೊಂಡು 1821 ರ ಜುಲೈ 28 ರಂದು ಪೆರುವಿನ ಸ್ವಾತಂತ್ರ್ಯವನ್ನು ಘೋಷಿಸಿದ. ಆ ವೇಳೆಗೆ ವೆನಿಜ್ವೇಲಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ನಾಯಕ್ಯ ಸಿಮಾನ್ ಬೊಲಿವಾರದೊಡನೆ ಮಾರ್ಟಿನ್ ಸಮಾಲೋಚಿಸಿ, 1822 ರ ಸೆಪ್ಟಂಬರ್‍ನಲ್ಲಿ ಪೆರುವಿನಿಂದ ಹೊರಟುಹೋದ. ಆಂಡೀಸ್ ಶ್ರೇಣಿಗಳ ಮಧ್ಯಭಾಗದಲ್ಲಿದ್ದ ಸ್ಪ್ಯಾನಿಷ್ ಸೈನ್ಯಗಳನ್ನು ಎದುರಿಸುವ ಹೊಣೆ ಪೆರು ಮತ್ತು ಕೊಲಂಬಿಯಗಳ ಮೇಲೆ ಬಿತ್ತು. ಜೂನಿನ್ ಮತ್ತು ಆಯಾಕೂಚೊ ಎಂಬ ಸ್ಥಳಗಳಲ್ಲಿ ಸ್ಪ್ಯಾನಿಷ್ ಸೈನ್ಯವನ್ನು ಬೊಲೀವಾರ್ ಸಂಪೂರ್ಣವಾಗಿ ಸೋಲಿಸಿದ (824). ಕಾಯಾಪೊ ಪಟ್ಟಣದ ವಶದೊಂದಿಗೆ ಪೆರುವಿನಲ್ಲಿ ಸ್ಪ್ಯಾನಿಷ್ ಪ್ರಭುತ್ವ ಕೊನೆಗೊಂಡಿತು (1823). 
1822ರಲ್ಲಿ ಲೀಮಾ ನಗರದ ಸಂಸತ್ತು (ಕಾಂಗ್ರೆಸ್) ಪೆರು ಗಣರಾಜ್ಯ ಸಂವಿಧಾನ ರಚನೆಗೆ ಸಮ್ಮತಿ ನೀಡಿತು. 1823ರಲ್ಲಿ ಜೋಸೆ ದೆ ಲಾ ರೀವ ಅಗೂಯೆರೊ ಪ್ರಥಮ ರಾಷ್ಟ್ರಪತಿಯಾದ. ಆದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಕೊಲಂಬಿಯಾದಿಂದ ಬಂದಿದ್ದ ಬೊಲೀವಾರನನ್ನು ಸಂಸತ್ತು ಸರ್ವಾಧಿಕಾರಿಯೆಂದು ಘೋಷಿಸಿತು. 1826ರಲ್ಲಿ ಅವನನ್ನು ಪೆರು ರಾಜ್ಯದ ಅಜೀವ ರಾಷ್ಟ್ರಪತಿಯಾಗಿ ಚುನಾಯಿಸಲಾಯಿತು. ತಾನು ಸ್ಥಾಪಿಸಿದ್ದ ಕೊಲಂಬಿಯ ಒಕ್ಕೂಟಕ್ಕೆ ಪೆರುವನ್ನು ಸೇರಿಸುವುದು ಅವನ ಉದ್ದೇಶವಾಗಿತ್ತು. ಈ ರಾಜಕೀಯ ಘಟನೆಗಳಿಂದಲೂ ಬೊಲೀವಾರ್ ತಂದ ಕೊಲಂಬಿಯ ಸೈನ್ಯ ಪೆರು ರಾಜ್ಯದಲ್ಲಿ ಸ್ಥಿರವಾಗಿ ನಿಂತಿದ್ದರಿಂದಲೂ ಜನರು ಕೆರಳಿದರು. ಕೊಲಂಬಿಯದ ಅಶಾಂತ ಪರಿಸ್ಥಿತಿಯಿಂದಾಗಿ ಬೊಲೀವಾರ್ ಕೊಲಂಬಿಯಕ್ಕೆ ಹಿಂದಿರುಗಿದ. ಲೀಮಾದಲ್ಲಿ ಅವನು ಸ್ಥಾಪಿಸಿದ್ದ ಸರ್ಕಾರ ಉರುಳಿತು. ಹೊಸ ಸಂವಿಧಾನದ ರಚನೆಯಾಯಿತು (1827). 
ಬೊಲೀವಾರನ ತರುವಾಯ ಜೋಸೆ ದೆ ಲಾ ಮಾರ್ ರಾಷ್ಟ್ರಾಧ್ಯಕ್ಷನಾದ. ಕೊಲಂಬಿಯದಲ್ಲಿ ಬೊಲೀವಾರ್ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಲಾ ಮರ್ ಬೊಲೀವಿಯದಲ್ಲಿ ಆಗತಾನೆ ಸ್ಥಾಪಿತವಾಗಿದ್ದ ಗಣರಾಜ್ಯದಿಂದ ಬೊಲೀವಾರನ ಸೇನಾನಿ ಆಂಟೋನಿಯೋ ಜೋಸೆ ದೆ ಸುಕ್ರೇ ಎಂಬಾತನನ್ನು ಓಡಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡ (1828). ಕೊಲಂಬಿಯದ ಮೇಲೆ 1829ರಲ್ಲಿ ದಾಳಿ ನಡೆಸಿದ. ಈಗಿನ ಎಕ್ವಡಾರ್‍ನಲ್ಲಿರುವ ಸ್ವಾಯಾಕೀಲ ಪಟ್ಟಣವನ್ನು ವಶಪಡಿಸಿಕೊಂಡ. ಆದರೆ, ಅವನು ಟಾಕ್ರ್ವಿಯ ಬಳಿ ಸೇನಾನಿ ಸುಕ್ರೇಯನಿಗೆ ಸೋತು ಹಿಂದಿರುಗಿದ. ರಾಷ್ಟ್ರಪತಿ ಲೂಯಿ ಜೋಸೆ ಒರ್ಬೆಗೋಸೊನ ಕಾಲದಲ್ಲಿ ಪೆರು ಬೊಲೀವಿಯ ಒಕ್ಕೂಟಕ್ಕೆ ಸೇರಿತು. ಆದರೆ, ಚಿಲಿಯೊಡನೆ ನಡೆದ 3 ವರ್ಷಗಳ ಯುದ್ಧದಲ್ಲಿ ಒಕ್ಕೂಟ ಸೈನ್ಯ ಸೋತು, ಒಕ್ಕೂಟ ಕೊನೆಗೊಂಡಿತು (1836-391) ವರ್ಬೆಗೋಸೊನ ತರುವಾಯ ಅವನ ಸ್ಥಾನಕ್ಕೆ ಬಂದ ಆಸ್ಟಿನ್ ಗಾಮಾರ್ರಾ ಬೊಲಿವಿಯದ ಮೇಲೆ ದಂಡೆತ್ತಿ ಹೋಗಿ, ಇಂಗಾವಿಯ ಬಳಿ ಸೋತು ಹತನಾದ (1841).

ಕೆಲವು ವರ್ಷ ಅವ್ಯವಸ್ಥೆ ಮುಂದುವರಿಯಿತು. ಅಂತರ್ಯುದ್ಧಗಳು ನಡೆಯುತ್ತಲೇ ಇದ್ದುವು. ದಕ್ಷ ಸೈನ್ಯಾಧಿಕಾರಿ ರಮೋನ್ ಕ್ಯಾಸ್ಟಿಲ 1845-1851 ಹಾಗೂ 1855-1862ರಲ್ಲಿ ರಾಷ್ಟ್ರಪತಿಯಾಗಿ ರಾಜ್ಯದ ಪ್ರಗತಿಗೆ ಅನೇಕ ಸುಧಾರಣೆಗಳನ್ನು ತಂದ. ನೀಗ್ರೋ ಗುಲಾಮಗಿರಿಯನ್ನು ರದ್ದು ಮಾಡಿದ. ತಂತಿ ಮತ್ತು ರೈಲು ಮಾರ್ಗಗಳನ್ನು ಸ್ಥಾಪಿಸಿದ. ಪೆರುವಿನ ನೈಟ್ರೇಟ್ ನಿಕ್ಷೇಪ ಹಾಗೂ ಗ್ವಾನೊ ಕಡಲಹಕ್ಕಿಗಳ ಗೊಬ್ಬರವನ್ನು ಲಾಭದಾಯಕವಾಗಿ ಉಪಯೋಗಿಸಿಕೊಳ್ಳಲು ಕ್ರಮ ಕೈಗೊಂಡ, 1860ರಲ್ಲಿ ಉದಾರವಾದಿ ಸಂವಿಧಾನವೊಂದು ಅಂಗೀಕೃತವಾಯಿತು. ಅದು 1920 ರ ವರೆಗೆ ಜಾರಿಯಲ್ಲಿತ್ತು. ಕ್ಯಾಸ್ಟಿಲ ನಿವೃತ್ತನಾದ ಮೇಲೆ ಒಂದು ದಶಕ ಕಾಲ ಆಂತರಿಕ ಅವ್ಯವಸ್ಥೆ ಇತ್ತು. ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿತು. ಸರ್ಕಾರದ ಸಾಲ ಮಿತಿಮೀರಿ ಬೆಳೆಯಿತು. ದಕ್ಷಿಣ ಅಮೆರಿಕನ್ ವಸಾಹತುಗಳನ್ನು ಪುನಃ ವಶಪಡಿಸಿಕೊಳ್ಳಲು ಸ್ಪೇನ್ ದೇಶ ಮಾಡಿದ ಪ್ರಯತ್ನಗಳಿಂದಾಗಿ ಕಷ್ಟಗಳು ಉಲ್ಯಣಗೊಂಡುವು. ಪೆರು ರಾಜ್ಯ ಎಕ್ವಡಾರ್, ಬೊಲಿವಿಯ ಹಾಗೂ ಚಿಲಿ ರಾಜ್ಯಗಳ ನೆರವಿನಿಂದ ಕಾಯಾಪೊ ಪಟ್ಟಣವನ್ನು ಸ್ಪೇನ್ ಸೈನಿಕರ ದಾಳಿಯಿಂದ ರಕ್ಷಿಸಿತು. 1879ರಲ್ಲಿ ಶಾಂತಿ ಕೌಲು ಏರ್ಪಟ್ಟಿತು. ಸ್ಪೇನ್ ಅಂತಿಮವಾಗಿ ಪೆರು ದೇಶದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು. 
ಸ್ಪೇನ್ ಯುದ್ಧದ ತರುವಾಯ ರಾಷ್ಟ್ರಪತಿ ಜೋಸೆ ಬಾಲ್ಟ (1868-1872) ಜನೋಪಯೋಗಿ ಯೋಜನೆಗಳನ್ನು ಕೈಗೊಂಡು ದೇಶದ ಪ್ರಗತಿಗಾಗಿ ದುಡಿದ. ಆದರೆ, ದಂಗೆಯೊಂದರಲ್ಲಿ ಅವನು ಮೃತನಾದ. ಅನಂತರ ಬಂದ ಮಾನ್ಯುಯಲ್ ಪಾರ್ಡೊ (1872-1876) ಸರ್ಕಾರದಲ್ಲಿ ಸೈನಿಕ ಪ್ರಭಾವವನ್ನು ದಮನ ಮಾಡಿದ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು ಬಂದುವು. ಬೊಲಿವಿಯದೊಡನೆ ಇವನು ಮಾಡಿಕೊಂಡ ರಕ್ಷಣೆಯ ರಹಸ್ಯ ಒಪ್ಪಂದದ ಪರಿಣಾಮವಾಗಿ ಅಟಕಾಮದ ಬಗ್ಗೆ ಬೊಲಿವಿಯ ಹಾಗೂ ಚಿಲಿಗಳ ನಡುವಣ ವಿವಾದ ಸಂಬಂಧದಲ್ಲಿ ಪೆರು ದೇಶವೂ ಪೆಸಿಫಿಕ್ ಯುದ್ಧಕ್ಕೆ (1879-1883) ಸೆಳೆಯಲ್ಪಟ್ಟಿತು. ಈ ವಿವಾದದ ಮಧ್ಯಸ್ಥಿಕೆಯ ಪ್ರಶ್ನೆ ಪೆರುವಿನ ಮುಂದೆ ಬಂದಿತ್ತು. ಬೊಲುವಿಯದೊಡನೆ ಮಾಡಿಕೊಂಡ ಒಪ್ಪಂದವನ್ನು ರದ್ದು ಮಾಡಿ ಮಧ್ಯಸ್ಥಿಕೆ ವಹಿಸಬಹುದೆಂದು ಚಿಲಿ ಮಾಡಿದ ಸಲಹೆಯನ್ನು ಪಾರ್ಡೊ ನಿರಾಕರಿಸಿದ. ಬೊಲಿವಿಯ ಹಾಗೂ ಪೆರು ದೇಶಗಳ ಮೇಲೆ ಚಿಲಿ ಯುದ್ಧ ಘೋಷಿಸಿ ಎರಡು ರಾಜ್ಯಗಳನ್ನೂ ಸೋಲಿಸಿ, 1881ರಲ್ಲಿ ಲೀಮಾ ನಗರವನ್ನು ಆಕ್ರಮಿಸಿತು. 1883 ರ ಒಪ್ಪಂದದ ಪ್ರಕಾರ ಪೆರು ತನ್ನ ನೈಟ್ರೇಟ್ ಖನಿಜ ನಿಕ್ಷೇಪವಿರುವ ತರಪಕ ಪ್ರಾಂತ್ಯವನ್ನು ಚಿಲಿಗೆ ಒಪ್ಪಿಸಿ ಟಾಕ್ನಾ ಹಾಗೂ ಆರ್ಕಿಯ ಪ್ರಾಂತಗಳನ್ನು 10 ವರ್ಷಗಳ ಕಾಲ ಚಿಲಿ ರಾಜ್ಯಕ್ಕೆ ಬಿಟ್ಟುಕೊಡಲು ಒಪ್ಪಿತು. ಈ ಅವಧಿಯ ತರುವಾಯ ಈ ವಿಷಯವನ್ನು ಪ್ರಜಾ ನಿರ್ಧಾರಕ್ಕೆ ಒಪ್ಪಿಸಬೇಕೆಂಬ ನಿಯಮವನ್ನು ಪದೇ ಪದೇ ಮುಂದೂಡಲಾಗುತ್ತಿತ್ತು. ಕೊನೆಗೆ ಟಾಕ್ನಾ ಹಾಗೂ ಆರ್ಕಿಯ ವಿವಾದ 1929ರಲ್ಲಿ ಚಿಲಿಗೆ ಆರ್ಕಿಯವನ್ನು ಪೆರು ದೇಶಕ್ಕೆ ಟಾಕ್ನಾ ಪ್ರಾಂತ್ಯವನ್ನೂ ಹಿಂದಿರುಗಿಸಲಾಯಿತು.
ಪೆಸಿಫಿಕ್ ಯುದ್ಧದಿಂದ ಪೆರುಗೆ ಸಂಭವಿಸಿದ ಆರ್ಥಿಕ ಹಾಗೂ ಹಣಕಾಸಿನ ಮುಗ್ಗಟ್ಟು 20ನೆಯ ಶತಮಾನದವರೆಗೂ ಮುಂದುವರಿಯಿತು. 1881-1890 ರ ವರೆಗೆ ರಾಷ್ಟ್ರಾಧ್ಯಕ್ಷನಾಗಿದ್ದ ಆಂಟ್ರೆಸ್ ಕಾಸೆರಸ್ ಸರ್ಕಾರವನ್ನು ಪುನವ್ರ್ಯವಸ್ಥೆಗೊಳಿಸಿದ.
ಇಪ್ಪತ್ತನೆಯ ಶತಮಾನ: 1908-1912 ಹಾಗೂ 1919-1930ರಲ್ಲಿ ಅಗಸ್ಟೊಲೆಗ್ಯೂಯ ರಾಷ್ಟ್ರಾಧ್ಯಕ್ಷನಾಗಿದ್ದಾಗ ವ್ಯಾಪಕ ಆರ್ಥಿಕ ಬದಲಾವಣೆಗಳಾದುವು. ಬೊಲಿವಿಯ ಹಾಗೂ ಬ್ರಜಿಲ್‍ಗಳೊಡನೆ 1909ರಲ್ಲೂ ಕೊಲಂಬಿಯಾದೊಡನೆ 1922ರಲ್ಲೂ ಚಿಲಿಯೊಡನೆ 1929ರಲ್ಲೂ ಗಡಿ ಒಪ್ಪಂದಗಳಾದವು. 1920ರಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು, ಲೆಗ್ಯೂಯ ಎರಡನೆಯ ಬಾರಿ ಅಧ್ಯಕ್ಷನಾದಾಗ ಸರ್ವಾಧಿಕಾರಿಯಂತೆ ವರ್ತಿಸಿದ. ಅವನ ಅಧಿಕಾರಾವಧಿಯ ಕೊನೆಯಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ತೀವ್ರವಾಯಿತು. ಆಡಳಿತದ ಬಗ್ಗೆ ಪ್ರಜೆಗಳಲ್ಲಿ ಅಸಮಾಧಾನ ಬೆಳೆಯಿತು. ಪ್ರಪಂಚದ ಆರ್ಥಿಕ ಮುಗ್ಗಟ್ಟಿನಿಂದ (1930) ಪೆರುವಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕರ್ನಲ್ ಸಾಂಚೆಸ್ ಸೆರ್ರೋ ಕ್ಷಿಪ್ರ ಕ್ರಾಂತಿ ನಡೆಸಿ ರಾಷ್ಟ್ರಾಧ್ಯಕ್ಷನಾದ (1931). ಏಪ್ರಿಲ್ 1933ರಲ್ಲಿ ಹೊಸ ಸಂವಿಧಾನ ಜಾರಿಗೆ ಬಂತು. 
1932ರಲ್ಲಿ ಕೊಲಂಬಿಯದೊಡನೆ ಮನಸ್ತಾಪ ಬೆಳೆಯಿತು. 1922 ರ ಗಡಿ ಒಪ್ಪಂದದ ಬಗ್ಗೆ ವಿವಾದಗಳೇರ್ಪಟ್ಟುವು. ಯುದ್ಧ ಸಂಭವಿಸುವ ಪರಿಸ್ಥಿತಿ ಉಂಟಾಯಿತು. ಸಾಂಬ್ರೆಸ್ ಸೆರ್ರೋ ಯುದ್ಧಕ್ಕೆ ಇಳಿಯಲು ಆತುರಗೊಂಡಿದ್ದ. ಅವನ ಸರ್ವಾಧಿಕಾರಕ್ಕೆ ಪ್ರತಿಭಟನೆ ಉಂಟಾಯಿತು. 1933 ರ ಏಪ್ರಿಲ್ 30 ರಂದು ಅವನು ಕೊಲೆಯಾದ. ಅವನ ತರುವಾಯ ಅಧ್ಯಕ್ಷನಾದ ಆಸ್ಕಾರ್ ಬೆನವಿಡೆಸ್ ಕೊಲಂಬಿಯದೊಡನೆ ಸ್ನೇಹದಿಂದ ವರ್ತಿಸಿ ಒಪ್ಪಂದ ಮಾಡಿಕೊಂಡ (ಮೇ 24, 1934). ಅವನ ಆಡಳಿತದಲ್ಲಿ ಆರ್ಥಿಕ ಮುಗ್ಗಟ್ಟು ತಗ್ಗಿತು. ರಾಜಕೀಯ ವಿರೋಧ ಪಕ್ಷಗಳ, ವಿಶಿಷ್ಟವಾಗಿ ಮಾಕ್ರ್ಸ್‍ವಾದಿಯಾದ ಆಪ್ರಾ ಪಕ್ಷದ ದಮನವಾಯಿತು. ಅದು ಅಂತರರಾಷ್ಟ್ರೀಯ ಪಕ್ಷವೆಂದು 1936 ರ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಅದಕ್ಕೆ ಅವಕಾಶ ಕೊಡಲಿಲ್ಲ. ಆಡಳಿತ ಪಕ್ಷ ನಿಲ್ಲಿಸಿದ್ದ ಅಭ್ಯರ್ಥಿಗೆ ಚುನಾವಣೆಯಲ್ಲಿ ಸೋಲುಂಟಾಯಿತು. ಬೆನವಿಡೆಸ್ ಚುನಾವಣೆಯನ್ನು ಅನೂರ್ಜಿತಗೊಳಿಸಿ, ತನ್ನ ಅಧ್ಯಕ್ಷಾವಧಿಯನ್ನು 3 ವóರ್ಷ ಮುಂದುವರಿಸಿಕೊಂಡು 1939 ರ ವರೆಗೆ ಸರ್ವಾಧಿಕಾರಿಯಂತೆ ವರ್ತಿಸಿದ. ಆದರೂ, ಅವನ ಕಾಲದಲ್ಲಿ ಆಡಳಿತ ಸ್ತಿಮಿತಗೊಂಡಿತು. ಲೋಕೋಪಯೋಗಿ ಕಾರ್ಯಗಳಾದುವು. ಕಾರ್ಮಿಕರ ಪರಿಸ್ಥಿತಿ ಸುಧಾರಿಸಿತು. ಅವನ ತರುವಾಯ ರಾಷ್ಟ್ರಾಧ್ಯಕ್ಷನಾದ ಮಾನ್ಯುಯಲ್ ಪ್ರಾಡೊ ಸಮಾಜ ಸುಧಾರಣೆಯ ಕಾರ್ಯಗಳನ್ನು ಮುಂದುವರಿಸಿದ. 1941ರಲ್ಲಿ ಪೆರು ಹಾಗೂ ಎಕ್ವಡಾರ್‍ಗಳ ನಡುವೆ ಗಡಿ ಘರ್ಷಣೆ ಆಯಿತು. ಅದರ ಪರಿಣಾಮವಾಗಿ ರಿಯೋ ಡೆ ಜೆನೈರೋ ಒಪ್ಪಂದವಾಯಿತು. ಈ ಒಪ್ಪಂದಕ್ಕೆ ಅಮೆರಿಕ, ಅರ್ಜೆಂಟೀನ, ಬ್ರಜಿಲ್ ಹಾಗೂ ಚಿಲಿ ರಾಜ್ಯಗಳು ಭರವಸೆ ನೀಡಿದವು. ಎರಡನೆಯ ಮಹಾಯುದ್ಧದಲ್ಲಿ ಪೆರು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿತು (1945). ವಿಶ್ವಸಂಸ್ಥೆಯಲ್ಲಿ ಪೆರುವಿಗೂ ಸದಸ್ಯತ್ವ ದೊರಕಿತು.

1945ರಲ್ಲಿ ಪೀಪಲ್ಸ್ ಸಾರ್ಟಿ ಎಂದು ಹೆಸರು ಬದಲಾಯಿಸಿಕೊಂಡ ಆಪ್ರಾ ಪಕ್ಷದ ಅಭ್ಯರ್ಥಿ ಜೋಸೆ ಲೂಯಿ ಬುಸ್ಟಮಾಂಟೆ ಅಧ್ಯಕ್ಷನಾಗಿ ಚುನಾಯಿತರಾಗಿ 1945 ರ ಜುಲೈ 28 ರಂದು ಅಧಿಕಾರ ವಹಿಸಿಕೊಂಡರು. ಈ ಪಕ್ಷದ ಅಭ್ಯರ್ಥಿಗಳಲ್ಲಿ ಅನೇಕರು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಂದ ಕಾರಣ ಸಂಸತ್ತಿನಲ್ಲಿ ಅವರ ಪ್ರಭಾವವಿತ್ತು. 
1948 ಅಕ್ಟೋಬರ್‍ನಲ್ಲಿ ಸೈನಿಕ ಬಂಡಾಯದಿಂದ ಪದಚ್ಯುತರಾಗಿ ಬಂಡಾಯ ನಾಯಕ ಜನರಲ್ಲಿ ಮಾನ್ಯುಯಲ್ ಓಡ್ರಿಯಾ ಅಧ್ಯಕ್ಷರಾದರು. ಆಡಳಿತದಲ್ಲಿ ಅವರಿಗೆ ನೆರವು ನೀಡಲು ಮಿಲಿಟರಿ ಸಭೆ ಏರ್ಪಟ್ಟಿತು. 1950ರಲ್ಲಿ ಅವರು ಸಂವಿಧಾನಾತ್ಮಕವಾಗಿ ಚುನಾಯಿತರಾದ ರಾಷ್ಟ್ರಾಧ್ಯಕ್ಷರಾದರು. ಹಿಂದಿನ ಸರ್ಕಾರಗಳು ಹಾಕಿದ್ದ ಆರ್ಥಿಕ ನಿಯಂತ್ರಣಗಳನ್ನು ಅವರು ತೆಗೆದುಹಾಕಿ 1955 ರ ಹೊತ್ತಿಗೆ ಅಂತರರಾಷ್ಟ್ರೀಯ ವ್ಯಾಪಾರವನ್ನು ಉತ್ತಮಗೊಳಿಸಿ ಹಣಕಾಸಿನ ಪರಿಸ್ಥಿತಿಯನ್ನು ಹದಕ್ಕೆ ತಂದರು. ವ್ಯವಸಾಯ ಕೈಗಾರಿಕೆಗಳು ಆಧುನೀಕರಣಗೊಂಡವು. ಶಿಕ್ಷಣದಲ್ಲಿ ಸುಧಾರಣೆಗಳಾದುವು. ಓಡ್ರಿಯ 1956ರಲ್ಲಿ ಮುಕ್ತ ಚುನಾವಣೆಗಳನ್ನು ಏರ್ಪಡಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಆದರೆ, ಅವರು ಸೋತು ಮಾನ್ಯುಯಲ್ ಪ್ರಾಡೊ ಅಧ್ಯಕ್ಷರಾದರು. 

	ಪ್ರಾಡೊರ ಆಡಳಿತದಲ್ಲಿ ದೇಶದಲ್ಲಿ ಅಶಾಂತಿ ಉಂಟಾಯಿತು. 1962 ರ ಚುನಾವಣೆಗಳಲ್ಲಿ ಯಾವ ಅಭ್ಯರ್ಥಿಗೂ ಆಯ್ಕೆಗೆ ನಿಗದಿಯಾದ 1/2 ದಷ್ಟು ಮತ ಬರಲಿಲ್ಲ. ಈ ಬಗ್ಗೆ ಸಂಸತ್ತಿನ ನಿರ್ಣಯವಾಗುವುದಕ್ಕೆ ಮುಂಚೆಯೇ ಜುಲೈ 1962ರಲ್ಲಿ ಕ್ಷಿಪ್ರಾಕ್ರಮಣದಿಂದ ಸೈನಿಕ ಆಡಳಿತ ಸಭೆಯ ಸ್ಥಾಪನೆಯಾಯಿತು. ಹೊಸ ಚುನಾವಣೆಗಳು 1963ರಲ್ಲಿ ನಡೆದು ಬೆರೌಂಡೆ ಟೆರಿ ರಾಷ್ಟ್ರಾಧ್ಯಕ್ಷರಾದರು. 1968 ರ ಅಕ್ಟೋಬರ್‍ನಲ್ಲಿ ನಡೆದ ಮತ್ತೊಂದು ಕ್ಷಿಪ್ರಾಕ್ರಮಣದಿಂದ ಟೆರಿ ಪದಚ್ಯುತರಾದರು. ಜನರಲ್ ವೆಲಾಸ್ಕೊ ಅಲ್ವರಾಡೋ ಅಧ್ಯಕ್ಷರಾದರು. ಸಂಸತ್ತು ರದ್ದಾಗಿ ಡೈನಿಕ ಮಂತ್ರಿಮಂಡಲದ ನೇಮಕವಾಯಿತು. ಆಲ್ವರಾಡೋರ ಕ್ರಾಂತಿಕಾರಿ ಸರ್ಕಾರಕ್ಕೆ ದೇಶದ ರಚನೆಯನ್ನೇ ಪರಿವರ್ತಿಸುವ ಉದ್ದೇಶವಿತ್ತು. 1975 ರ ಫೆಬ್ರವರಿಯಲ್ಲಿ ತುರ್ತು ಪರಿಸ್ಥಿತಿಯ ಘೋóಷಣೆಯಾಯಿತು. ಸರ್ಕಾರದ ವಿರುದ್ಧ ಬಂಡಾಯಗಳನ್ನು ಅಡಗಿಸಲು ನಾಗರಿಕ ಹಕ್ಕುಗಳು ರದ್ದಾದವು. ಯುದ್ಧ ಖಾತೆಯ ಮಂತ್ರಿ ಹಾಗೂ ಪ್ರಧಾನ ಸೇನಾನಾಯಕರಾಗಿ ಜನರಲ್ ಫ್ರಾನ್ಸಿಸ್ಕೊ ಮೊರಾಲೆಸ್ ಬೆರೂಡೆಸರ ನೇಮಕವಾಯಿತು. ಜನರಲ್ ಆಲ್ವರಾಡೋರ ಅನಾರೋಗ್ಯದಿಂದ ಅಧ್ಯಕ್ಷ ಸ್ಥಾನಕ್ಕೆ ಜನರಲ್ ಮೊರಾಲೆಸ್ ಬೆರೂಡೆಸ್ (ಆಗಸ್ಟ್ 1975) ಬಂದರು. 1976ರಲ್ಲಿ ಸೈನ್ಯ ಪಡೆಗಳಲ್ಲಿ ಒಡಕುಂಟಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರು. ಮಂತ್ರಿಮಂಡಲದ ಪುನರ್ರಚನೆಯಾಯಿತು. 1980 ರ ಹೊತ್ತಿಗೆ ಪ್ರಜಾಸತ್ತಾತ್ಮಕ ಆಡಳಿತವನ್ನು ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡಿತು. ಈ ಸಂದಿಗ್ಧ ಕಾಲದಲ್ಲಿ ಜನರಲ್ ಮೊರಾಲೆಸೆ ಬೆರೂಡೆಸ್ ಸೈನ್ಯದಿಂದ ನಿವೃತ್ತಿ ಹೊಂದಿದರೂ ಅಧ್ಯಕ್ಷರಾಗಿ ಮುಂದುವರರಿಯಬೇಕೆಂಬ ಮನವಿ ಬಂತು. 1977 ರ ಮೇ - ಜೂನ್‍ನಲ್ಲಿ ಆರ್ಥಿಕ ಸಮಸ್ಯೆಗಳು ಉದ್ಭವಿಸಿದುವು. ಸರ್ಕಾರದ ಆರ್ಥಿಕ ನೀತಿಯಿಂದ ಜನರಲ್ಲಿ ಅಸಮಾಧಾನವಾಯಿತು. ಪ್ರಜಾರಾಜ್ಯ ಸ್ಥಾಪನೆಗೆ ಅನುಕೂಲವಾಗುವಂತೆ 14 ತಿಂಗಳುಗಳ ಕಾಲ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ಹಾಗೂ ಪತ್ರಿಕೆಗಳ ಮೇಲಣ ಸೆನ್ಸಾರ್ ನಿಯಂತ್ರಣವನ್ನು ಸರ್ಕಾರ 1977 ರ ಆಗಸ್ಟ್‍ನಲ್ಲಿ ತೆಗೆದುಹಾಕಿತು. 1978ರಲ್ಲಿ ಮುಖ್ಯ ಮಂತ್ರಿಯಾಗಿ ಜನರಲ್ ಆಸ್ಕಾರ್ ಮೋಲಿನಾ ಪಲ್ಲೋಚಿಯ ನೇಮಕಗೊಂಡರು. 1979 ರ ಜುಲೈ ಹೊತ್ತಿಗೆ ಹೊಸ ಸಂವಿಧಾನವನ್ನು ರಚಿಸಲು ಹಾಗೂ 1980ರಲ್ಲಿ ಚುನಾವಣೆಗಳನ್ನು ನಡೆಸಲು ಸರ್ಕಾರ ಕ್ರಮ ಕೈಗೊಂಡಿತು. 
ಕಳೆದೆರಡು ದಶಕಗಳ ರಾಜಕೀಯ:

	ಪೆರು ಬಹಳಷ್ಟು ರಾಜಕೀಯ ಅಶಾಂತಿಯನ್ನು ಕಂಡಿದೆ. 1980ರಲ್ಲಿ ವಿಪರೀತದ ಗಲಭೆಯ ನಂತರ `ಆರ್ಮಿ ರೂಲ್ ಕೊನೆಗೊಂಡು ಪ್ರಜಾತಾಂತ್ರಿಕ ಚುನಾವಣೆ ನಡೆಯಿತು. 1963ರ ನಂತರ ನಡೆದ ಮೊಟ್ಟ ಮೊದಲ ಡೆಮಾಕ್ರಟಿಕ್ ಚುನಾವಣೆ ಇದು. ಈ ಚುನಾವಣೆಯಲ್ಲಿ ಫರ್ನಾಂಡೋ ಟೆರ್ರಿ ಅಧ್ಯಕ್ಷರಾಗಿ ಆರಿಸಿ ಬಂದರು.

	1980ರ ದಶಕದ ಮಧ್ಯದಿಂದ ಸಶಸ್ತ್ರ ಕ್ರಾಂತಿಕಾರಿ ಸಂಘಟನೆಯ ಕಾರ್ಯ ಪೆರುವಿನಲ್ಲಿ ಹೆಚ್ಚಿತು. ಆ ಸಂಘಟನೆಯ ಹೆಸರು `ಮಾವೊಯಿಸ್ಟ್ ಕಮ್ಯುನಿಸ್ಟ್ ಪಾರ್ಟಿ ಆಫ್ ಪೆರು ಅಥವಾ `ಶೈನಿಂಗ್ ಪಾತ್ ಎಂದು, ಶೈನಿಂಗ್ ಪಾತ್, ಪೆರುವಿನ ಪೂರ್ವ ಅರಣ್ಯ ಪ್ರದೇಶದಲ್ಲಿ ಕ್ರಾಂತಿಕಾರಿ ಹೋರಾಟಕ್ಕಿಳಿದ ಸಂಘಟನೆ, `ಶೈನಿಂಗ್ ಪಾತ್ ಗ್ರಾಮೀಣ ಹಾಗೂ ನಗರಗಳಲ್ಲೂ ನಿಯಂತ್ರಣ ಪಡೆಯತೊಡಗಿತ್ತು.

	`ಶೈನಿಂಗ್ ಪಾತ್ ಹುಟ್ಟಿಗೆ ಹಿನ್ನಲೆಯಿತ್ತು. ಮಿಲಿಟರಿ ಆಡಳಿತದಲ್ಲಿ ಸಿಲುಕಿದ್ದ ಪೆರು, 1963ರಲ್ಲಿ ಪ್ರಜಾತಾಂತ್ರಿಕವಾಗಿ ಅಧ್ಯಕ್ಷನನ್ನು ಪಡೆದಿತ್ತು. ಆದರೆ 1968ರಲ್ಲಿ ಸೇನೆ, ಮತ್ತೆ ಅಧಿಕಾರವನ್ನು ಕಿತ್ತುಕೊಂಡಿತು. ವಿದೇಶಿ ಕಂಪನಿಗಳು ದೇಶದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಇಂತಹ ರಾಜಕೀಯ ಸಂದರ್ಭದಲ್ಲಿ, 1970ರಲ್ಲಿ `ಶೈನಿಂಗ್ ಪಾತ್ ಜನ್ಮ ತಳೆಯಿತು. ಅದರ ಮುಖ್ಯಸ್ಥ ಅಬಿಮೇಲ್ ಗಸ್ಮನ್ ಬಹುಕಾಲ ಕಮ್ಯುನಿಸ್ಟ್ ಆಗಿದ್ದಾತ. ತತ್ವಜ್ಞಾನದ ಪ್ರಾಧ್ಯಾಪಕನಾಗಿ ಅನೆಕ ವರ್ಷ ಕೆಲಸ ಮಾಡಿದ್ದ ಈತ ಕ್ರಾಂತಿಗೆ ಕರೆ ಕೊಟ್ಟ. ಆತ ಮತ್ತು ಆತನ ಹಿಂಬಾಲಕರು ಸಶಸ್ತ್ರ ಹೋರಾಟದ ಕರೆ ನೀಡಿ, ಹಿಂಸಾತ್ಮಕ ಹಾದಿಯನ್ನು ಹಿಡಿದರು.

	1985ರ ಚುನಾವಣೆಯಲ್ಲಿ ಆಲನ್ ಗಾರ್ಸಿಯಾ ಅಧ್ಯಕ್ಷರಾಗಿ ಆರಿಸಿ ಬಂದರು. ಈತನ ಕಾಲದಲ್ಲಿ ಪೆರುವಿನ ಸ್ಥಿತಿಯಲ್ಲಿ ಸುಧಾರಣೆ ಕಾಣಲಿಲ್ಲ. ಆರ್ಥಿಕ ಸ್ಥಿತಿ ಕುಸಿಯಿತು. ಪೆರುವಿನ ಹಣವಾದ `ಸೋಲೆಯ ಮೌಲ್ಯವೇ ಸಂಪೂರ್ಣ ಕಳೆದು ಹೋಗಿ 1986ರಲ್ಲಿ ಹೊಸ ರೂಪಾಯಿ `ಇಂಟಿಯನ್ನು ತಂದದ್ದಿದೆ. ಒಂದು ಕಡೆ ಹಣದುಬ್ಬರ ಬೆಳೆದು ನಿಂತಿತು, ಇನ್ನೊಂದು ಕಡೆ ಕ್ರಾಂತಿಕಾರಿ ಗೆರಿಲ್ಲಾ ಯುದ್ಧ ಮುಂದುವರೆದಿತ್ತು. ಈ ಎಲ್ಲ ಹಿನ್ನಲೆಯಲ್ಲಿ 1990ರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಫ್ಯುಜಿಮೊರಿ ಆರಿಸಿ ಬಂದರು. ಈತ ಜಪಾನಿನಿಂದ ವಲಸೆ ಬಂದ ಕುಟುಂಬಕ್ಕೆ ಸೇರಿದಾತ. ಫ್ಯುಜಿಮೊರಿ ಪಡೆದ ಪೆರು ಹದಗೆಟ್ಟ ಅವಸ್ಥೆಯಲ್ಲಿತ್ತು. ಹಣದುಬ್ಬರ ಶೇಕಡಾ 8000 ಇತ್ತು. ಫ್ಯುಜಿಮೊರಿ `ಶೈನಿಂಗ್ ಪಾತ್ ಅನ್ನು ನಿಯಂತ್ರಿಸುವ ಆಶ್ವಾಸನೆ ಕೊಟ್ಟರು.

	ಫ್ಯುಜಿಮೊರಿ ಚುನಾವಣೆಯಲ್ಲಿ ಗೆದ್ದು ಪಡೆದ ಪೆರು ಪ್ರಜಾತಂತ್ರದಿಂದ ಬಲು ದೂರವಿತ್ತು. ಒಂದು ಕಡೆ `ಶೈನಿಂಗ್ ಪಾತ್ ಸಶಸ್ತ್ರ ಗೆರಿಲ್ಲಾ ಯುದ್ಧಗಳಿದ್ದವು. ಹನ್ನೆರಡು ವರ್ಷಗಳ ಕಾಲ `ಸಿವಿಲ್ ಆಡಳಿತವಿದ್ದರೂ ಪೆರುವಿನ ನೆಲದಲ್ಲಿ ಪ್ರಜಾಪ್ರಭುತ್ವ ಬೇರೂರಿರಲಿಲ್ಲ. ಫ್ಯುಜಿಮೊರಿಯ ಸರಕಾರ ಕ್ರಾಂತಿಕಾರಿಗಳನ್ನು ಹತ್ತಿಕ್ಕಲು ಅಮೆರಿಕದ ಸಹಾಯದಿಂದ `ರೋಂಡಾಸ್ ಎಂಬ ಪ್ಯಾರಾಮಿಲಿಟರಿ ವಿಭಾಗವನ್ನು ತೆರೆಯಿತು. ಪೆರುವಿನ ಯೋಧರಿಗೆ ಅತ್ಯಂತ ಕ್ರೂರ ರೀತಿಯ ತರಪೇತನ್ನು ನೀಡಲಾಯಿತು.

	ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಾಕಷ್ಟು ಗೊಂದಲದಲ್ಲಿದ್ದ ಪೆರುವನ್ನು ಫ್ಯುಜಿಮೊರಿ 1992ರಲ್ಲಿ `ಪ್ರೆಸಿಡೆನ್ಷಿಯಲ್ ಕೂ ಮೂಲಕ ಎತ್ತಿಕೊಂಡರು. ಕಾಂಗ್ರೆಸನ್ನು ರದ್ದುಗೊಳಿಸಿದರು. ನೂರಾರು ರಾಜಕೀಯ ಖೈದಿಗಳು, ವಿದ್ಯಾರ್ಥಿಗಳು, ನ್ಯಾಯವಾದಿಗಳು, ಪತ್ರಕರ್ತರು ಇದ್ದಕ್ಕಿದ್ದಂತೆ ನಾಪತ್ತೆಯಾದರು. 1992ರ ಸೆಪ್ಟೆಂಬರ್ 12ರಂದು ಕ್ರಾಂತಿಕಾರಿಗಳ ಮುಖಂಡನನ್ನು ಸೆರೆ ಹಿಡಿಯಲಾಯಿತು. ಕ್ರಾಂತಿಕಾರಿ ಗುಂಪುಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಯಥೇಚ್ಛವಾಗಿ ವಿಪರೀತಗಳು ನಡೆದವು.

	1995ರ ಚುನಾವಣೆಯಲ್ಲಿ ಫ್ಯುಜಿಮೊರಿ ಮತ್ತೆ ಗೆದ್ದು ಬಂದರು. ಆದರೆ ಅಧಿಕಾರ `ನ್ಯಾಷನಲ್ ಇಂಟಿಲಿಜೆನ್ಸ್ ಸರ್ವೀಸ್‍ನ ಕೈಯಲ್ಲಿತ್ತು. ಈ ಗುಪ್ತ ಪೋಲಿಸು ತಂಡಕ್ಕೆ ವ್ಲಾದಿಮಿರ್ ಮಾಂಟೆಸಿನೋ ಮುಖಂಡರಾಗಿದ್ದರು. ಗುಪ್ತ ಪೋಲಿಸು ತಂಡದ ಕೈಯಲ್ಲಿ ಪಾರದರ್ಶಕತೆ, ರಾಜಕೀಯ ಹೊಣೆ, ಜವಾಬ್ದಾರಿ, ಸಂಪೂರ್ಣ ನಾಶವಾಯಿತು. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಕೆಲಸ ನಡೆಯಿತು. 1996ರ ಜೂನ್ ತಿಂಗಳಲ್ಲಿ, ಪೆರುವಿನ ಮೂರು ಜೈಲುಗಳಲ್ಲಿ ಹಿಡಿದಿಟ್ಟ ರಾಜಕೀಯ ಖೈದಿಗಳಲ್ಲಿ, 300 ಜನ ಒಂದೇ ದಿನ ಕೊಲ್ಲಲಾಯಿತು. ಫ್ಯುಜಿಮೊರಿಯ ಕಾಲ ಪೆರುವಿನ ಜನಸಾಮಾನ್ಯರ ಬದುಕು ಬದಲಾಗಲಿಲ್ಲ. 1990ರಿಂದೀಚೆಗೆ ಬಡತನದಲ್ಲಿ ಬದುಕುವ ಜನರ ಸಂಖ್ಯೆ ದ್ವಿಗುಣಗೊಂಡಿತ್ತು.

	ಪೆರುವಿನ ರಾಜಕೀಯದಲ್ಲಿ ಮಹಿಳೆಯರ ಪಾತ್ರವೂ ಸಕ್ರಿಯವಾಗಿದೆ. ಫ್ಯುಜಿಮೊರಿಯ ಹೆಂಡತಿ ಸೂಸಾನ್ ಹಿಗುಚಿ, ಭ್ರಷ್ಟ ಸರ್ವಾದಿಕಾರವನ್ನು ಪ್ರತಿಭಟಿಸಿ ಅಧ್ಯಕ್ಷರ ಅರಮನೆಯಿಂದ ಹೊರಬಂದರು. 1995ರಲ್ಲಿ ಸುಸಾನ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪತಿಯ ವಿರುದ್ಧ ನಿಲ್ಲುವ ಉದ್ದೇಶವನ್ನು ವ್ಯಕ್ತಪಡಿಸಿದರು. `ಅಧ್ಯಕ್ಷರ ಸಂಬಂಧಿಕರಾರೂ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವಂತಿಲ್ಲ.' ಎಂದು ಕಾಂಗ್ರೆಸ್ ಬಿಲ್ಲು ಪಾಸು ಮಾಡಿದ ಕಾರಣ, ಆಕೆ ಚುನಾವಣೆಗೆ ನಿಲ್ಲಲಾಗಲಿಲ್ಲ. ಈ ಹೊಸ ಕಾನೂನು `ಸುಸಾನ್ ಕಾನೂನು ಎಂದೇ ಪ್ರಸಿದ್ಧವಾಯಿತು. 1985ರ ಚುನಾವಣೆಯಲ್ಲಿ ಫ್ಯುಜಿಮೊರೆ ಗೆದ್ದು ಬಂದರು.

	ಏಪ್ರಿಲ್ 2000ರ ಚುನಾವಣೆಯಲ್ಲಿ, ಫ್ಯುಜಿಮೊರೆ ಮೂರನೆ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದರು. ಪೆರುವಿನ ಸಂವಿಧಾನದ ಪ್ರಕಾರ ಮೂರನೆ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಲ್ಲುವಂತಿರಲಿಲ್ಲ. ಫ್ಯುಜಿಮೊರೆ ಕಾಂಗ್ರೆಸನ್ನು ರದ್ದುಗೊಳಿಸಿದರು. ಪೆರುವಿನಲ್ಲಿ ಮತ ಚಲಾಯಿಸದೆ ಇರುವುದು ಕಾನೂನು ಬಾಹಿರ ಅಪರಾಧ. ಹೀಗಿದ್ದೂ ಫ್ಯುಜಿಮೊರೆ ಮತ್ತೆ ನಿಂತಿದ್ದ ಈ ಚುನಾವಣೆಯನ್ನು ಬಹಳಷ್ಟು ಜನ ಬಹಿಷ್ಕರಿಸಿದರು. ಫ್ಯುಜಿಮೊರಿ ಈ ಚುನಾವಣೆಯಲ್ಲೂ ಗೆದ್ದು ಬಂದರು. ಆದರೆ, ಅವರ ಆಡಳಿತದ ಬಲಗೈಯಾಗಿದ್ದ ಮಾಟಿಸಿನೋ ಲಂಚ ತೆಗೆದುಕೊಳ್ಳುತ್ತಿರುವ, ಬೆದರಿಕೆ ಹಾಕಿ ನ್ಯಾಯಾಧೀಶರಿಂದ ಪತ್ರಿಕೋದ್ಯಮಿಗಳಿಂದ, ದೂರದರ್ಶನ ಕೇಂದ್ರಗಳ ಮಾಲೀಕರಿಂದ ಹಣ ವಸೂಲು ಮಾಡುತ್ತಿರುವ `ವಿಡಿಯೋ ಚಿತ್ರ ಸಾರ್ವಜನಿಕಗೊಂಡು, ನವೆಂಬರ್ 2000, ಫ್ಯುಜಿಮೊರಿ ಸರಕಾರ ಉರುಳಿತು. ಫ್ಯುಜಿಮೊರಿ ಜಪಾನಿಗೆ ಓಡಿ, ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿದರು. ಆದರೆ ಪೆರುವಿನ ಕಾಂಗ್ರೆಸ್ ಆತನ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಆತನನ್ನು ಅಧ್ಯಕ್ಷ ಪದವಿಯಿಂದ ಇಳಿಸಿತು. ತಾತ್ಕಾಲಿಕವಾಗಿ ವ್ಯಾಲೆಂಟಿನ್ ಪ್ಯಾಸಿಯಾಗ್ ಅಧ್ಯಕ್ಷರಾಗಿ ಸರಕಾರ ನಡೆಸಿದರು. ಇಂದಿಗೂ ಫ್ಯುಜಿಮೊರಿ ಜಪಾನಿನಲ್ಲಿದ್ದಾರೆ. ಫ್ಯುಜಿಮೊರಿ ಜಪಾನಿಗೆ ಓಡಿದ ಸಮಯದಲ್ಲೇ ಮಾಂಟಿಸಿನೋ ಕಣ್ಮರೆಯಾದರು. 2001ರ ಜುಲೈ ತಿಂಗಳು ಈತನನ್ನು ವೆನೆನ್ಸುಲಾದಲ್ಲಿ ಬಂಧಿಸಿದರು.

	ಮಿಲಿಟರಿ ಸರ್ವಾಧಿಕಾರಿದಿಂದಲೂ, `ಶೈನಿಂಗ್ ಪಾತ್ ಕ್ರಾಂತಿಕಾರಿ ಗೆರಿಲ್ಲಾ ತಂಡದಿಂದಲೂ ಬಲು ಬಳಲಿದ್ದ ಪೆರುವಿನಲ್ಲಿ 2001ರಲ್ಲಿ ಚುನಾವಣೆ ನಡೆಯಿತು. ತೊಲೆದೋ ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರಿಸಿಬಂದರು.

	ಈಗ ಪೆರುವಿನ ರಾಷ್ಟ್ರಾಧ್ಯಕ್ಷರಾಗಿರುವ ತೊಲೆದೋ, ಕೆಚುವಾ ಭಾಷೆಯಲ್ಲಿ ಮಾತನಾಡಬಲ್ಲ ಮೊಟ್ಟಮೊದಲ ಸ್ಥಳೀಯ ರಾಷ್ಟ್ರಾಧ್ಯಕ್ಷರು. ನಿಧಾನವಾಗಿ ಪ್ರಜಾತಂತ್ರ ಇಂದು ಪೆರುವಿನ ನೆಲದಲ್ಲಿ ಕಾಲೂರುತ್ತಿದೆ. ತೊಲೆದೋ ಆಂಡಿಯನ್ ಮೂಲದ ವ್ಯಕ್ತಿ. ಪೆರುವಿನಲ್ಲಿ ಆಂಡಿಯನ್ ಮೂಲ ನಿವಾಸಿಗಳು ನಗರಗಳಿಗೆ ವಲಸೆ ಬಂದಾಗ, ಈಗಲೂ ಅವರನ್ನು ನಿಕೃಷ್ಟವಾಗಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವುದುಂಟು. `ಎಲ್ ಚೋಲೋ ಎಂದು ಮೂದಲಿಸುವುದೂ ಉಂಟು. ಈತ ಅಧ್ಯಕ್ಷ ಸ್ಥಾನಕ್ಕೆ ಆರಿಸಿ ಬಂದ ಸಾಮಾನ್ಯ ಪೆರುವಿಗರ ಪ್ರಥಮ ಪ್ರತಿನಿಧಿ ಎನಿಸಿದ್ದಾರೆ. ಇವರ ಚುನಾವಣೆಯೊಂದಿಗೆ ಸರ್ವಾಧಿಕಾರಕ್ಕೆ ಇತಿ ಹಾಡಿ, ಪ್ರಜಾತಂತ್ರಕ್ಕೆ ಹಿಂತಿರುಗುವ ಆಶಾವಾದ ಜನರಲ್ಲಿ ಮೂಡಿತು.
	ಇಂದು ಪೆರುವಿನ `ಸತ್ಯ ಮತ್ತು ಸಂಧಾನ ನಿಯೋಗ 1980ರಿಂದ 2000ದ ನಡುವೆ ರಾಜಕೀಯ ಹಿಂಸಾಚಾರದಲ್ಲಿ ಮೃತರಾದ 30,000 ಜನರ ಸಾವಿನ ತನಿಖೆ ಮಾಡುತ್ತಿದೆ. ಸೆಪ್ಟೆಂಬರ್ 2001ರಲ್ಲಿ ಆರಂಭವಾದ ನಿಯೋಗ, ಮಾನವ ಹಕ್ಕುಗಳ ಉಲ್ಲಂಘನೆಯ ಕೇಸುಗಳ ತನಿಖೆಗಿಳಿದಿದೆ.
ಸಂವಿಧಾನ ಮತ್ತು ಸರಕಾರ

ಪೆರು ಒಂದು ಗಣರಾಜ್ಯ. ಗಣಿ, ನೆಲ, ಜಲ, ಕಾಡು ಮುಂತಾದ ನೈಸರ್ಗಿಕ ಸಂಪನ್ಮೂಲಗಳು ರಾಜ್ಯದ ಒಡೆತನದಲ್ಲಿವೆ. ಅವನ್ನು ಬಳಸಿಕೊಳ್ಳಲು ಖಾಸಗಿ ಜನಕ್ಕೆ ಸರ್ಕಾರ ಅನುಮತಿ ನೀಡಬಹುದು. ಅಂತರರಾಷ್ಟ್ರೀಯ ಸಂಬಂಧವುಳ್ಳ ರಾಜಕೀಯ ಪಕ್ಷಗಳಿಗೆ ದೇಶದಲ್ಲಿ ಸ್ಥಾನವಿಲ್ಲ. ಆತ್ಮಸಾಕ್ಷಿಯ ಸ್ವಾತಂತ್ರ್ಯ, ನಂಬಿಕೆಗಳು, ಇವು ವ್ಯಕ್ತಿಯ ಹಕ್ಕುಗಳು. ರಾಜ್ಯದ ಭದ್ರತೆಗಾಗಿ ಯಾವುದೇ ಹಕ್ಕನ್ನು ಕಾರ್ಯಾಂಗ ಮೊಟಕು ಮಾಡಬಹುದು. ವಿಲಂಬನಗೊಳಿಸಬಹುದು. 21 ರಿಂದ 60 ವಯಸ್ಸಿನವರೆಗಿನ ಸ್ತ್ರೀ ಪುರುಷರೆಲ್ಲರೂ ಕಡ್ಡಾಯವಾಗಿ ಮತ ನೀಡಬೇಕು. 60 ರ ಅನಂತರ ಇದು ಐಚ್ಛಿಕ.
ವಿಧಾನಾಂಗ: ಪೆರು ರಾಷ್ಟ್ರದಲ್ಲಿ ದ್ವಿಸದನೀಯ ಸಂಸತ್ತು ಇದೆ. ಅದಕ್ಕೆ ಕಾಂಗ್ರೆಸ್ ಎಂದು ಹೆಸರು. ಸೆನೆಟ್ ಮೇಲ್ಮನೆ; ಅದರ ಸದಸ್ಯರು 45. ಚೇಂಬರ್ ಆಫ್ ಡೆಪ್ಯುಟೀಸ್ ಕೆಳಮನೆ : ಅದರ ಸದಸ್ಯರು 140. ಉಭಯ ಸದನಗಳ ಅವಧಿ ಆರು ವರ್ಷ. ವರ್ಷದಲ್ಲಿ 120 ದಿನ ಸಂಸತ್ತಿನ ಅಧಿವೇಶನ ನಡೆಯಬೇಕು. ಸದಸ್ಯರ ಆಯ್ಕೆ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ, ಕಾನೂನಿನ ರಚನೆ, ಅರ್ಥ ವಿವರಣೆ, ತಿದ್ದುಪಡಿ ಹಾಗೂ ರದ್ದು. ಸಂವಿಧಾನ ನಿಯಮಗಳ ಉಲ್ಲಂಘನೆಯ ಪರಿಶೀಲನೆ - ಇವು ಸಂಸತ್ತಿನ ಪ್ರಧಾನ ಕಾರ್ಯಗಳು. ಸರ್ಕಾರದ ಬಜೆಟ್ಟನ್ನು ಅನುಮೋದಿಸುವ ಅಥವಾ ನಿರಾಕರಿಸುವ, ತೆರಿಗೆಗಳನ್ನು ವಿಧಿಸುವ ಅಥವಾ ರದ್ದು ಮಾಡುವ ಅಧಿಕಾರ ಅದಕ್ಕಿದೆ. ಆದರೆ, ಸರ್ಕಾರ ಈ ಬಗ್ಗೆ ವಿಧೇಯಕಗಳನ್ನು ಮಂಡಿಸಿದಾಗ ಮಾತ್ರವೇ ಸಂಸತ್ತು ಕ್ರಮ ಕೈಗೊಳ್ಳುತ್ತದೆ. ಸರ್ಕಾರ ಸಾಲಗಳನ್ನೆತ್ತಲು ಸಂಸತ್ತಿನ ಅನುಮೋದನೆ ಅಗತ್ಯ, ಸರ್ಕಾರ ಮಾಡುವ ಒಪ್ಪಂದಗಳನ್ನು, ಅನುಮೋದಿಸುವ ಇಲ್ಲವೇ ತಳ್ಳಿ ಹಾಕುವ ಅಧಿಕಾರವೂ ಸಂಸತ್ತಿನದು. 
ಕಾರ್ಯಾಂಗ: ರಾಷ್ಟ್ರಾಧ್ಯಕ್ಷ ಪ್ರಧಾನ ಕಾರ್ಯಾಂಗ ಮುಖ್ಯ. ಚುನಾವಣೆಯ ಮೂಲಕ 5 ವರ್ಷ ಅವಧಿಗೆ ಅವನ ನೇಮಕವಾಗುತ್ತದೆ. ಚುನಾವಣೆಯ ವರ್ಷದ ಜುಲೈ 28 ರಿಂದ ಅವನ ಅಧಿಕಾರ ಪ್ರಾರಂಭ. ರಾಷ್ಟ್ರಾಧ್ಯಕ್ಷನ ಆಯ್ಕೆಯಾಗುವಾಗಲೇ ಮೊದಲನೆಯ ಹಾಗೂ ಎರಡನೆಯ ಉಪಾಧ್ಯಕ್ಷರ ಆಯ್ಕೆಯಾಗುತ್ತದೆ. ಸಂಸತ್ತಿನ ಅನುಮತಿ ಇಲ್ಲದೆ ಸೈನ್ಯಾಧಿಕಾರವನ್ನು ವಹಿಸಿಕೊಳ್ಳುವ ಅಧಿಕಾರ ರಾಷ್ಟ್ರಾಧ್ಯಕ್ಷನಿಗಿಲ್ಲ. ಹಾಗೆ ಸೈನ್ಯಾಧಿಕಾರವನ್ನು ವಹಿಸಿಕೊಂಡರೆ ಅವನು ಸೈನಿಕ ನಿಯಮಗಳಿಗೆ ಒಳಗಾಗುತ್ತಾನೆ. 

ಆಡಳಿತ: ಆಡಳಿತಕ್ಕಾಗಿ ಪೆರುವನ್ನು 24 ಡಿಪಾರ್ಟ್‍ಮೆಂಟ್‍ಗಳಾಗಿ (ವಿಭಾಗ). 150 ಪ್ರಾಂತ್ಯಗಳಾಗಿ, 1,425 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಆಡಳಿತ ವಹಿಸಲು ಪ್ರತಿ ವಿಭಾಗಕ್ಕೂ ಒಬ್ಬ ಫ್ರಿಫೆಕ್ಟ್, ಪ್ರತಿ ಪ್ರಾಂತ್ಯಕ್ಕೂ ಒಬ್ಬ ಉಪ-ಫ್ರಿಫೆಕ್ಟ್ ಮತ್ತು ಪ್ರತಿ ಜಿಲ್ಲೆಗೂ ಒಂದು ಆಡಳಿತ ಸಭೆ ಇವೆ. ನಗರ ಪಾಲಿಕೆಗಳಿಗೆ ಮೇಯರ್ ಹಾಗೂ ಸದಸ್ಯರ ಚುನಾವಣೆ ಮೂತು ವರ್ಷಗಳಿಗೊಮ್ಮೆ ನಡೆಯುತ್ತದೆ. 

ನ್ಯಾಯಾಡಳಿತ: ಪೆರು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ಲೀಮಾದಲ್ಲಿದೆ. ಅದಕ್ಕೆ ಒಬ್ಬ ಅಧ್ಯಕ್ಷ ಹಾಗೂ 10 ನ್ಯಾಯಮೂರ್ತಿಗಳಿರುತ್ತಾರೆ. ಸಂಸತ್ತಿನಿಂದ ಅವರ ನೇಮಕವಾಗುತ್ತದೆ. ಉಚ್ಚ ನ್ಯಾಯಾಲಯಗಳು ಕೆಲವು ಗೊತ್ತಾದ ಡಿಪಾರ್ಟ್‍ಮೆಂಟ್‍ಗಳಲ್ಲಿ ಸ್ಥಾಪಿತವಾಗಿವೆ. ಪ್ರಾಂತ್ಯಗಳ ಆಡಳಿತ ಕೇಂದ್ರಗಳಲ್ಲಿ ಪ್ರಥಮ ವಿಚಾರಣಾ ನ್ಯಾಯಾಲಯಗಳಿವೆ. ಪಟ್ಟಣಗಳಲ್ಲಿ ಶಾಂತಿಪಾಲನೆ ನ್ಯಾಯಾಧೀಶರಿದ್ದಾರೆ. ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಿಸುವ ಪಟ್ಟಿಯಿಂದ ರಾಷ್ಟ್ರಾಧ್ಯಕ್ಷ ನೇಮಿಸುತ್ತಾನೆ. ಕೆಳಗಿನ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಗಳನ್ನು ಸರ್ವೋಚ್ಚ ನ್ಯಾಯಾಲಯ ಸ್ಥಿರೀಕರಿಸುತ್ತದೆ.

ಆರ್ಥಿಕತೆ

ವ್ಯವಸಾಯ: 1970ರಲ್ಲಿ 30,00,000 ಹೆಕ್ಟೇರುಗಳಷ್ಟು ಕೃಷಿಭೂಮಿ ಇತ್ತು. ಪ್ರಧಾನ ಬೆಳೆಗಳು ಆಲೂಗಡ್ಡೆ, ಮೆಕ್ಕೆಜೋಳ, ಗೋಧಿ, ಬಾರ್ಲಿ, ಹತ್ತಿ, ಕಬ್ಬು, ಬತ್ತ, ಕಾಫಿ, ಚಹ ಮತ್ತು ಹಣ್ಣು. ಬಂಜರು ಹಾಗೂ ಬೆಟ್ಟಗಾಡಿನ ಭೂಮಿಯಲ್ಲಿ ವ್ಯವಸಾಯಕ್ಕೆ ಹೆಚ್ಚು ಅವಕಾಶವಿಲ್ಲವಾಗಿ, ದೇಶದ ಅಗತ್ಯದಲ್ಲಿ ಸೇ. 20 ರಷ್ಟು ಆಹಾರ ಧಾನ್ಯವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಪೆರುವಿನಲ್ಲಿ ನೂರಕ್ಕೂ ಹೆಚ್ಚು ಬಗೆಯ ಆಲೂಗಡ್ಡೆಗಳಿವೆ. ಬಗೆಬಗೆಯ ಬಣ್ಣ ಮತ್ತು ಗಾತ್ರದ ಮೆಕ್ಕೆಜೋಳಗಳಿವೆ. ಇವು ಸಾಂಪ್ರದಾಯಿಕವಾಗಿ ಬೆಳೆದ ಮೆಕ್ಕೆಜೋಳಗಳು. ಈ ನೆಲದಲ್ಲಿ ಮೆಕ್ಕೆಜೋಳಗಳನ್ನು ಐದು ಸಾವಿರ ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ.

ಮೀನುಗಾರಿಕೆ: ಇತ್ತೀಚಿನ ದಶಕಗಳಲ್ಲಿ ಮೀನುಗಾರಿಕೆಯ ಅಭಿವೃದ್ಧಿಯಾಗಿದೆ. ಆಹಾರಕ್ಕಾಗಿ ಹೆಚ್ಚುಹೆಚ್ಚಾಗಿ ಮೀನನ್ನು ನಿರ್ಯಾತ ಮಾಡುವ ರಾಷ್ಟ್ರಗಳಲ್ಲಿ ಪೆರುವೂ ಒಂದು. 

ಕೈಗಾರಿಕೆ: ಸ್ಥಳೀಯ ಬೇಡಿಕೆಗಳನ್ನು ಪೂರೈಸುವಷ್ಟರ ಮಟ್ಟಿಗೆ ಕೈಗಾರಿಕೆಗಳ ಪ್ರಗತಿಯಾಗಿದೆ. ಬಟ್ಟೆ, ಸಿಮೆಂಟ್, ಪಾದರಕ್ಷೆ, ಇಟ್ಟಿಗೆ, ಹೆಂಚು, ಬಣ್ಣ, ಅಲ್ಯೂಮಿನಿಯಮ್ ಪಾತ್ರೆ, ಕಾಗದ, ಪೀಠೋಪಕರಣಗಳು, ಗಾಜಿನ ಸಾಮಾನು, ರಾಸಾಯನಿಕ ವಸ್ತುಗಳು, ಟೈರ್, ರಬ್ಬರ್ ಸಾಮಾನು, ಡಬ್ಬದಲ್ಲಿ ಮೀನು ಪ್ಯಾಕ್ ಮಾಡುವುದು - ಇವು ಪ್ರಧಾನ ಕೈಗಾರಿಕೆಗಳು. 
ಖನಿಜ: ರಾಜ್ಯದಲ್ಲಿ ವಿಪುಲ ಖನಿಜ ನಿಕ್ಷೇಪವಿದೆ. 1968ರಿಂದ ಕ್ರಾಂತಿಕಾರಿ ಸರ್ಕಾರ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಿ ನಿಕ್ಷೇಪಗಳ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿದೆ. ಕಬ್ಬಿಣ, ಮ್ಯಾಂಗನೀಸ್, ಕಲ್ಲಿದ್ದಲು, ತಾಮ್ರ, ಸೀಸ, ತವರ, ಬೆಳ್ಳಿ, ಚಿನ್ನ, ಟಂಗ್‍ಸ್ಟನ್ ಮೊದಲಾದ ಖನಿಜಗಳ ಉತ್ಪಾದನೆಯ ಗಣಿಗಳಿವೆ. ಪೆರುವಿನಲ್ಲಿ ಚಿನ್ನವೂ ದೊರಕುತ್ತದೆ. ಉತ್ತರದ ಮರಳುಗಾಡಿನಲ್ಲಿ ಪೆಟ್ರೋಲಿಯಮ್ ದೊರಕುತ್ತದೆ. 

ಅರಣ್ಯಗಾರಿಕೆ: ಪೆರುವಿನ ಅರಣ್ಯ ಸಂಪತ್ತು ವಿಶಿಷ್ಟವಾದ್ದು. ಅರಣ್ಯಗಳಿಂದ ಕೊಕೊ ಕಾಯಿಗಳನ್ನು ಸಂಗ್ರಹಿಸಲಾಗುತ್ತದೆ. ರಬ್ಬರ್ ಒಂದು ಮುಖ್ಯ ಅರಣ್ಯೋತ್ಪನ್ನ. ರಾಷ್ಟ್ರದ ಪೂರ್ವಭಾಗಗಳಲ್ಲಿ ಚೌಬೀನೆ ಕಾರ್ಖಾನೆಗಳಿವೆ. ಆದರೆ, ಕಾಡಿನಿಂದ ದಿಮ್ಮಿಗಳನ್ನು ಕಾರ್ಖಾನೆಗಳಿಗೆ ಸಾಗಿಸಲು ಸಾರಿಗೆ ಸೌಲಭ್ಯವಿಲ್ಲ. ಮಹಾಗನಿ, ಸಿಡಾರ್, ಓಕ್ ಇವುಗಳ ಚೌಬೀನೆಯಿಂದ ಮರದ ಸಾಮಾನುಗಳ ತಯಾರಿಕೆಯಾಗುತ್ತದೆ. ಕೆಲವು ಮರಗಳ ತೊಗಡೆಗಳು ಚರ್ಮ ಹದ ಮಾಡಲು ಉಪಯುಕ್ತವಾಗಿವೆ. ಮೃದು ತಿರುಳಿನ ಮರಗಳಿಂದ ಕಾಗದ ತಯಾರಿಕೆಯಾಗುತ್ತದೆ. 

ವಿದ್ಯುಚ್ಛಕ್ತಿ: ನದಿಗಳಿಂದ ಜಲ ವಿದ್ಯುತ್ತನ್ನು ಉತ್ಪಾದಿಸಲು ಹೆಚ್ಚು ಅವಕಾಶವಿದೆ. ವಿದ್ಯುತ್ತಿನ ಬಳಕೆ ಕೈಗಾರಿಕೆಗಳಲ್ಲಿ ಅಧಿಕವಾಗುತ್ತಿದೆ. ರಾಷ್ಟ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನಲ್ಲಿ ಅರ್ಧ ಭಾಗದಷ್ಟನ್ನು ಲೀಮಾ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ. 

ಸಾರಿಗೆ ಸಂಪರ್ಕ

ಆಂಡೀಸ್ ಪರ್ವತಗಳ ಚಾಚು ಹಾಗೂ ಕಡಿದಾದ ಕಣಿವೆಗಳು, ಅಮೆಜಾನ್ ನದಿ ಜಾಲ ಇವುಗಳಿಂದ ಪೆರು ರಾಜ್ಯದಲ್ಲಿ ರೈಲು ಮಾರ್ಗಗಳನ್ನು ಸಂಈಟಿಸಿ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ರಸ್ತೆ ಹಾಗೂ ವಿಮಾನ ಸಂಚಾರ ಪ್ರಧಾನವಾಗಿವೆ.

ರಸ್ತೆ: 1996 ರಲ್ಲಿ 70,000 ಕಿ.ಮೀ. ರಸ್ತೆಗಳಿದ್ದುವು. ಉತ್ತರದಿಂದ ದಕ್ಷಿಣಕ್ಕೆ ಸಾಗುವ ರಸ್ತೆಗಳ ಪೈಕಿ ಎಕ್ವಡಾರ್‍ನಿಂದ ಚಿಲಿ ಕಡೆಗೆ ಹೋಗುವ ಅಖಿಲ ಅಮೆರಿಕ ಹೆದ್ದಾರಿ - ಎಕ್ವಡಾರ್ ಮತ್ತು ಬೊಲಿವಿಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಖ್ಯವಾದವು. ಪೆಸಿಫಿಕ್ ಸಾಗರದ ಅಂಚಿನಿಂದ ಪೂರ್ವದಲ್ಲಿಯ ಅಮೆಜಾನ್ ನದೀ ತೀರದ ಪಟ್ಟಣಗಳಿಗೆ ಹೋಗುವ ರಸ್ತೆಗಳು ರಾಷ್ಟ್ರಕ್ಕೆ ಅಡ್ಡಲಾಗಿ ಸಾಗಿವೆ. 

ರೈಲ್ವೆ: ದೇಶದಲ್ಲಿ 19 ರೈಲು ಮಾರ್ಗಗಳಿವೆ. ಅವುಗಳಲ್ಲಿ 9 ಸರ್ಕಾರಿ, ಉಳಿದವು ಖಾಸಗಿ. ಸಾಗರದಂಚಿನ ಕಯಾವೊ ಪಟ್ಟಣಕ್ಕೂ ರಾಷ್ಟ್ರ ಮಧ್ಯದ ಸೆರ್ರೊದೆ ಪಾಸ್ಕೊ ಗಣಿ ಕೇಂದ್ರಕ್ಕೂ ಸಂಪರ್ಕ ಕಲ್ಪಿಸುವ ಮಾರ್ಗ ಪ್ರಧಾನವಾದ್ದು. ಸಮುದ್ರ ಮಟ್ಟಕ್ಕೆ 4,818 ಮೀ. ಎತ್ತರದಲ್ಲಿ ಸಾಗುವ ಇದು ಪ್ರಪಂಚದ ಅತ್ಯಂತ ಎತ್ತರದ ರೈಲು ಮಾರ್ಗ. ಈ ಮಾರ್ಗ ಖನಿಜ ಸಾಗಣೆಗೆ ಅನುಕೂಲವಾಗಿದೆ. 1860ರಲ್ಲಿ ಈ ರೈಲು ಮಾರ್ಗವನ್ನು ಹಾಕುವ ಕಾರ್ಯ ಪ್ರಾರಂಭವಾಯಿತು. ಇದರ 344 ಕಿ.ಮೀ. ದೂರದಲ್ಲಿ 66 ಸುರಂಗಗಳೂ 59 ಸೇತುವೆಗಳೂ ಇವೆ. 1976ರಲ್ಲಿ ಪೆರು ರಾಜ್ಯದಲ್ಲಿದ್ದ ರೈಲು ಮಾರ್ಗಗಳ ಉದ್ದ 2,544 ಕಿ.ಮೀ. 

ಜಲಸಾರಿಗೆ: ಕಯಾವೋ ಅತ್ಯಂತ ದೊಡ್ಡ ಬಂದರು. ಚೀಮೋಟೆ ಪ್ರಪಂಚದ ಅತ್ಯಂತ ಹಿರಿಯ ಮೀನುಗಾರಿಕೆ ರೇವುಪಟ್ಟಣ. ಅಮೆಜಾನ್ ನದಿಯ ಮೇಲಿರುವ ಇಕ್ವಿಟೋಸ್ ಪ್ರಧಾನ ನದೀ ಬಂದರು.
ವಿಮಾನ ಸಾರಿಗೆ: ಪರ್ವತಮಯವಾದ ಪೆರು ರಾಜ್ಯದಲ್ಲಿ ವಿಮಾನ ಸಂಚಾರಕ್ಕೆ ತೊಂದರೆಗಳಿವೆ. 1928ರಲ್ಲಿ ಪ್ರಯಾಣಿಕರಿಗಾಗಿ ವಿಮಾನ ಸಂಚಾರ ಪ್ರಾರಂಭವಾಯಿತು. ರಾಜ್ಯದಲ್ಲಿ 150 ವಿಮಾನ ನಿಲ್ದಾಣಗಳಿವೆ. ಲೀಮಾ ಹಾಗೂ ಕಯಾವೋ ನಗರಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ದಕ್ಷಿಣ ಅಮೆರಿಕದ ಇತರ ಗಣರಾಜ್ಯಗಳಿಗೆ, ಯೂರೋಪ್ ಹಾಗೂ ಅಮೆರಿಕಕ್ಕೆ ಈ ನಿಲ್ದಾಣಗಳಿಂದ ವಿಮಾನಗಳು ಹಾರುತ್ತವೆ. 

ಸಂಪರ್ಕ: ಪೆರು ರಾಜ್ಯದ ಪ್ರಧಾನ ದೈನಂದಿನ ಪತ್ರಿಕೆಗಳು ಎಲ್ ಪರೊವಾನೋ ಹಾಗೂ ಎಲ್ ಕೊರ್ಮರ್ಷಿಯೋ, 200 ಕ್ಕೂ ಹೆಚ್ಚು ಆಕಾಶವಾಣಿ ಪ್ರಸಾರ ಕೇಂದ್ರಗಳಿವೆ. ಲೀಮಾ ಮೊದಲಾದ ದೊಡ್ಡ ನಗರಗಳಲ್ಲಿ ದೂರದರ್ಶನ ಕೇಂದ್ರಗಳಿವೆ.
											(ವಿ.ಜಿ.ಕೆ.)
ಶಿಕ್ಷಣ ಪದ್ಧತಿ: ಪೆರುವಿನಲ್ಲಿ ಶಿಕ್ಷಣ ರಾಜ್ಯದ ಸಾಮಾನ್ಯ ಹೊಣೆಗಾರಿಕೆಗೆ ಸೇರಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಶಿಕ್ಷಣ ಸಚಿವಾಲಯವೇ ವ್ಯವಸ್ಥೆಗೊಳಿಸಿ ನಡೆಸಿಕೊಂಡು ಬರುತ್ತಿವೆ. ಉನ್ನತ ಶಿಕ್ಷಣವನ್ನು ಸ್ವಯಮಾಡಳಿತ ಖಾಸಗಿ ವಿಶ್ವವಿದ್ಯಾಲಯಗಳೂ ನಾರ್ಮಲ್ ಸ್ಕೂಲುಗಳೂ, ಕೆಲವು ಸ್ವತಂತ್ರ ಸಂಸ್ಥೆಗಳೂ ನಡೆಸುತ್ತಿವೆ. ಈ ಸಂಸ್ಥೆಗಳು ಶಿಕ್ಷಣ ಸಚಿವರ ಸಾಮಾನ್ಯ ನಿರ್ದೇಶನದಲ್ಲಿ ಕೆಲಸ ಮಾಡುತ್ತವೆ. ರಾಷ್ಟ್ರದ ಅಧ್ಯಕ್ಷರು ಶಿಕ್ಷಣ ಸಚಿವರನ್ನು ನೇಮಿಸುತ್ತಾರೆ. ಅವರು ಶಿಕ್ಷಣದ ಬಗ್ಗೆ ಸಲಹೆ ನೀಡಲು ಎಲ್ಲ ಅಂತಸ್ತಿನ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನೂ ಒಳಗೊಂಡಂತೆ ರಾಷ್ಟ್ರೀಯ ಸಲಹಾ ಮಂಡಳಿಯನ್ನು ನೇಮಿಸುತ್ತಾರೆ. 1965ರಲ್ಲಿ ಶಿಕ್ಷಣದ ಆಡಳಿತವನ್ನು ವಿಕೇಂದ್ರೀಕರಿಸಲಾಯಿತು. ರಾಷ್ಟ್ರವನ್ನು ಸಲಾಯಿತು. ರಾಷ್ಟ್ರವನ್ನು ಐದು ವಿಭಾಗಗಳನ್ನಾಗಿ ಮಾಡಿ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಶಿಕ್ಷಣ ನಿರ್ದೇಶಕರನ್ನು ನೇಮಿಸಲಾಯಿತು. ಇವರು ಶಿಕ್ಷಣ ಸಚಿವರಿಗೆ ಹೊಣೆಗಾರರಾಗಿ ಕೆಲಸ ಮಾಡುವರು. ಸಾಮಾನ್ಯವಾಗಿ ಇವರು ತಮ್ಮ ತನಿಖಾಧಿಕಾರಿಗಳ ಮೂಲಕ ಎಲ್ಲ ಖಾಸಗಿ ಸಂಸ್ಥೆಗಳಿಗೆ ಸೌಲಭ್ಯಗಳನ್ನು ಒದಗಿಸುವರಲ್ಲದೆ ತಾವು ಸೂಚಿಸುವ ಪಠ್ಯಕ್ರಮವನ್ನು ಅನುಸರಿಸುತ್ತಿವೆಯೇ ಎಂಬುದನ್ನು ನೋಡಿಕೊಳ್ಳುತ್ತಾರೆ. ಎಣ್ಣೆ ಉತ್ಪಾದನಾ ಸಂಸ್ಥೆ, ಗಣಿ ಸಂಸ್ಥೆ ಮುಂತಾದವು ನಡೆಸುತ್ತಿರುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಅನುದಾನವೂ ನಿರ್ದೇಶನವೂ ದೊರೆಯುತ್ತದೆ.

ಶಿಕ್ಷಣ ವಿಕೇಂದ್ರೀಕರಣವಾಗಿದ್ದರೂ ಶಿಕ್ಷಣದ ವೆಚ್ಚವನ್ನೆಲ್ಲ ಕೇಂದ್ರ ಸರ್ಕಾರವೇ ವಹಿಸಿಕೊಳ್ಳುತ್ತದೆ. ಶಿಕ್ಷಣ ಸಚಿವರು ಶಿಕ್ಷಣದ ಆದಾಯ ವೆಚ್ಚದ ಅಂದಾಜು ಪತ್ರವನ್ನು ಸಿದ್ದಪಡಿಸಿ ಪ್ರತಿವರ್ಷ ಕಾಂಗ್ರಸ್ಸಿನ ಅನುಮೋದನೆ ಪಡೆಯುತ್ತಾರೆ. ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕೂ 50 ಡಾಲರ್ ವೆಚ್ಚವಾಗುವುದೆಂದು ಅಂದಾಜು. ಸಾಮಾನ್ಯವಾಗಿ ರಾಷ್ಟ್ರದ ಒಟ್ಟು ವೆಚ್ಚದಲ್ಲಿ ಸುಮಾರು 1/5 ಭಾಗ ಶಿಕ್ಷಣಕ್ಕೆ ಮೀಸಲು. 

ಪ್ರಾಥಮಿಕ ಶಿಕ್ಷಣ 7 ವರ್ಷ ಕಾಲದ್ದು. ಕಾನೂನಿನ ಪ್ರಕಾರ 7 ರಿಂದ 14 ವರ್ಷ ವಯೋಮಾನದ ಶಿಕ್ಷಣವನ್ನು ಕಡ್ಡಾಯ ಮಾಡಿದ್ದರೂ ಅದು ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. ಇಡೀ ರಾಷ್ಟ್ರದಲ್ಲಿ ಪ್ರಾಥಮಿಕ ಶಿಕ್ಷಣ ಉಚಿತವಾಗಿ ದೊರೆಯುತ್ತದೆ. ಒಂದು ವರ್ಷದ ಪ್ರಾಥಮಿಕ ಪೂರ್ವದ ಶಿಕ್ಷಣ ವ್ಯವಸ್ಥೆ ಇದ್ದರೂ ಅದನ್ನು ಖಾಸಗಿ ಸಂಸ್ಥೆಗಳು ಮಾತ್ರ ನಿರ್ವಹಿಸುತ್ತಿವೆ. ಇಲ್ಲಿ ನರ್ಸರಿ ಮತ್ತು ಕಿಂಡರ್‍ಗಾರ್ಟನ್ ಪದ್ಧತಿಯನ್ನನುಸರಿಸುವುದು ಕಂಡುಬರುತ್ತದೆ. ಶಾಲೆಗಳು ಪ್ರಾಥಮಿಕ ಶಾಲೆಗೆ ಸಿದ್ಧತೆಯನ್ನು ನೀಡುವಂಥ ಶಿಕ್ಷಣ ಒದಗಿಸುತ್ತವೆ. ಪ್ರಾಥಮಿಕ ಶಾಲೆಯ ಅನಂತರ ಐದು ವರ್ಷದ ಪ್ರೌಢ ಶಿಕ್ಷಣವಿದೆ. ಇದನ್ನು 3 ವರ್ಷದ ಕಿರಿಯ ಮತ್ತು 2 ವರ್ಷದ ಹಿರಿಯ ವಿಭಾಗಗಳನ್ನಾಗಿ ವಿಂಗಡಿಸಿದೆ. ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ವ್ಯಾಸಂಗ ವಿಷಯವನ್ನನುಸರಿಸಿ 3ರಿಂದ 6 ವರ್ಷಗಳವರೆಗೆ ವಿಸ್ತರಿಸಿರುವುದುಂಟು. 

ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಗೊಳಿಸಲು ಈಚಿಗೆ ಸರ್ಕಾರ ಆಸಕ್ತಿ ವಹಿಸುತ್ತಿದೆ. ಸುಮಾರು 25 ಲಕ್ಷ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವರು. ಸುಮಾರು 5000 ಅಧ್ಯಾಪಕರು ಆ ಕಾರ್ಯದಲ್ಲಿ ತೊಡಗಿರುವರು. 
ಪ್ರೌಢ ಶಿಕ್ಷಣವೂ ಉಚಿತವಾಗಿ ದೊರೆಯುತ್ತದೆ. ಸುಮಾರು ಸೇ. 80 ರಷ್ಟು ವಿದ್ಯಾರ್ಥಿಗಳು ಸರ್ಕಾರದ ಶಾಲೆಗಳಲ್ಲಿ ಓದುತ್ತಾರೆ. ವಿಶ್ವವಿದ್ಯಾಲಯಕ್ಕೆ ಪ್ರವೇಶಿಸತಕ್ಕ ವಿದ್ಯಾರ್ಥಿಗಳಲ್ಲಿ ಬಹುಭಾಗ ಚರ್ಚುಗಳು ನಡೆಸುತ್ತಿರವು ಖಾಸಗಿ ಪ್ರೌಢಶಾಲೆಗಳಿಂದ ಬರುತ್ತಾರೆ. ಈಚೆಗೆ ಇವುಗಳ ಪಠ್ಯಕ್ರಮವನ್ನು ಸುಧಾರಿಸಲು ಪ್ರಯತ್ನಗಳಾಗುತ್ತಿವೆ. ಹಿರಿಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಭಾಷೆ ಸಾಹಿತ್ಯ ವಿಜ್ಞಾನ ಇತಿಹಾಸ ಭೂ ವಿವರಣೆ ಈ ವಿಷಯಗಳನ್ನೂ ವಾಣಿಜ್ಯ ಕೃಷಿ ಮುಂತಾದ ಐಚ್ಛಿಕ ವಿಷಯಗಳನ್ನು ವ್ಯಾಸಂಗ ಮಾಡುತ್ತಾರೆ. ಸೈನಿಕ ಶಾಲೆ ಕೈಗಾರಿಕಾ ಶಾಲೆ ನೌಕಾಶಾಲೆ ಪಾಲಿಟೆಕ್ನಿಕ್ ಇವು ಈ ಮಟ್ಟದ ಉದ್ಯೋಗ ಶಿಕ್ಷಣವನ್ನು ಒದಗಿಸುತ್ತವೆ. ದೇಶದಲ್ಲಿ 500 ಸಾಮಾನ್ಯ ಪ್ರೌಢಶಾಲೆಗಳಿದ್ದು, ಅಲ್ಲಿ 4 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವುಗಳಲ್ಲಿ 12,000 ಅಧ್ಯಾಪಕರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಜೊತೆಗೆ 400 ತಾಂತ್ರಿಕ ಪ್ರೌಢಶಾಲೆಗಳೂ ಇವೆ.
ಉನ್ನತ ಶಿಕ್ಷಣ ಮುಖ್ಯವಾಗಿ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ದೊರೆಯುತ್ತದೆ. ಅವುಗಳಲ್ಲಿ ಲೀಮಾ ವಿಶ್ವವಿದ್ಯಾಲಯವೇ ಪ್ರಮುಖವಾದ್ದು. ಇವುಗಳ ಜೊತೆಗೆ ರೋಮನ್ ಕ್ಯಾತೊಲಿಕ್ ದೇವತಾಶಾಸ್ತ್ರದ ಹಾಗೂ ಪುರೋಹಿತರ ಶಿಕ್ಷಣದ ವಿಶ್ವವಿದ್ಯಾಲಯಗಳೂ ಇವೆ. 

ವಿಶ್ವವಿದ್ಯಾಲಯಗಳಲ್ಲೂ ನಾರ್ಮಲ್ ಸ್ಕೂಲುಗಳಲ್ಲೂ ಅಧ್ಯಾಪಕರ ಶಿಕ್ಷಣದ ವ್ಯವಸ್ಥೆಯಿದೆ. ಪ್ರೌಢಶಾಲೆಯ ಶಿಕ್ಷಣ ಪಡೆದವರು ಅಧ್ಯಾಪಕರ ವೃತ್ತಿ ಶಿಕ್ಷಣಕ್ಕೆ ಸೇರುವರು. 3 ಅಥವಾ 5 ವರ್ಷದ ಈ ಶಿಕ್ಷಣದ ಪಠ್ಯಕ್ರಮ ಬೋಧಿಸಬೇಕಾದ ವಿಷಯ ವೃತ್ತಿವಿಷಯ, ಅಭ್ಯಾಸಾರ್ಥ ಬೋಧನೆ ಇವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ರಾಷ್ಟ್ರದಲ್ಲಿ 25 ಪ್ರಶಿಕ್ಷಣ ಸಂಸ್ಥೆಗಳು ಏರ್ಪಟ್ಟಿವೆ. 

ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸೌಲಭ್ಯ ಸಾಲದಾಗಿದ್ದು ನಿರಕ್ಸರಸ್ಥರ ಸಂಖ್ಯೆ ಅಧಿಕವಾಗಿದೆ. ಯುನೆಸ್ಕೊ ಮುಂತಾದ ಸಂಸ್ಥೆಗಳ ಸಹಾಯದಿಂದ ಅಕ್ಷರ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ಈಚೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೂ ಈ ಕಾರ್ಯದಲ್ಲಿ ತೊಡಗಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಅತಿ ಹೆಚ್ಚಿನ ನಿಲುಗಡೆಯೂ ವ್ಯರ್ಥ ವ್ಯಯವೂ ಕಂಡುಬರುತ್ತದೆ. ಪ್ರಾಥಮಿಕ ಶಾಲೆಗೆ ಸೇರಿದ ಮಕ್ಕಳಲ್ಲಿ ಬಹುಪಾಲು ನಾಲ್ಕು ವರ್ಷದ ಶಿಕ್ಷಣವನ್ನೂ ಮುಗಿಸದೆ ಶಾಲೆಯನ್ನು ಬಿಟ್ಟುಬಿಡುತ್ತಿದ್ದಾರೆ. ಅಂಥ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. 
`ಕಳೆದು ಹೋದ ಇನ್ಕಾ ನಗರಿ-ಮಾಚುಪಿಚು

	ಆಂಡೀಸ್ ಪರ್ವತ ಶಿಖರಗಳ ತೊಟ್ಟಿಲಲ್ಲಿ, ದಕ್ಷಿಣ ಅಮೆರಿಕದ ಅತ್ಯಂತ ಮನೋಹರ ಐತಿಹಾಸಿಕ ಪಳಿಯುಳಿಕೆಯಾಗಿ `ಮಾಚುಪಿಚುವನ್ನು ಗುರುತಿಸುತ್ತಾರೆ. ಈ ನೆಲದಲ್ಲಿ ನೂರಾರು ವರ್ಷಗಳು ಆಳಿ ನೆಲೆಸಿದ ಸ್ಪ್ಯಾನಿಷರಿಗೆ ಈ ನಗರ ಸಿಕ್ಕಿರಲಿಲ್ಲ. 1911ರಲ್ಲಿ ಸ್ಥಳೀಯರ ಸಹಾಯದಿಂದ ಈ ನಗರ ಹೊರ ಜಗತ್ತಿಗೆ ಪರಿಚಯವಾಯಿತು.

	ಮಾಚುಪಿಚು ನಗರ ಎರಡು ಪರ್ವತ ಶಿಖರಗಳ ನಡುವೆ ತೂಗಿದ ತೊಟ್ಟಿಲಲ್ಲಿದೆ. ಮಾಚುಪಿಚು ಇಂದಿಗೂ ರಹಸ್ಯ ರೋಮಾಂಚನದ ನಗರವಾಗಿ ಉಳಿದಿದೆ. ಎರಡೂ ಪಕ್ಕಕ್ಕೂ ಆಳದ ಕಣಿವೆಗಳಿವೆ. ವೇಗವಾಗಿ ಹರಿಯುವ `ಉರುಬಂಬಾ ನದಿ ಆಳವಾದ ಇಕ್ಕಟ್ಟು ಕಣಿವೆಯನ್ನು ಕೊರೆದು, ಮಾಚುಪಿಚುವನ್ನು ಸುತ್ತಿ ತರುವಿ ಹರಿದುಹೋಗಿದೆ.

	ಮಾಚುಪಿಚು ದಕ್ಷಿಣ ಅಮೆರಿಕದ ಅತ್ಯಂತ ರಮಣೀಯ ಪ್ರವಾಸಿ ತಾಣ. ಆಂಡಿಯನ್ ಸಂಸ್ಕøತಿಯ ಉತ್ಕøಷ್ಟ ಸಂಕೇತವಿದು. ಪುರಾತನ ಪೆರುವಿಗರು ಏರು ಎತ್ತರದಲ್ಲಿ ಸುತ್ತಲಿನ ಪ್ರಕೃತಿಯೊಡನೆ ಲೀನವಾಗದಂತೆ ಕಟ್ಟಿದ ಅಧ್ಯಾತ್ಮ ನಗರಿ-ಮಾಚುಪಿಚು. ಮಾಚುಪಿಚುವನ್ನು ಹದಿನಾಲ್ಕನೇ ಶತಮಾನದಲ್ಲಿ ಇನ್ಕಾಗಳು ಕಟ್ಟಿದರು. ಹದಿನಾರನೆ ಶತಮಾನದ ಮಧ್ಯಭಾಗದಲ್ಲಿಯೂ ಜೀವಂತವಿದ್ದ ನಗರವಿದು.

	ಮಾಚುಪಿಚು ನಗರದ ನಿಜವಾದ ಹೆಸರೇನೆಂದು ಯಾರಿಗೂ ಗೊತ್ತಿಲ್ಲ. `ಮಾಚುಪಿಚು ಎಂದರೆ `ಹಳೆಯ ಬೆಟ್ಟ ಎಂದಷ್ಟೇ ಅರ್ಥ. ಇದನ್ನು `ಕಂಡು ಹಿಡಿದ ಹಿರಿಮೆ ಹಿರಮ್ ಬಿಂಗಮ ಎಂಬಾತನಿಗೆ ಸೇರಿದೆ.

	ಹಿರಮ್ ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಚರಿತ್ರೆಯ ಪ್ರಾಧ್ಯಾಪಕ. ಈ ಸ್ಥಳ ಸ್ಥಳೀಯರಿಗೆ ಹತ್ತೊಂಬತ್ತನೇ ಶತಮಾನದಲ್ಲಿಯೇ ತಿಳಿದಿತ್ತು. ಬೆಟ್ಟದ ಬುಡದಿಂದೇ ಆರಂಭವಾಗುವ ಇನ್ಕಾಗಳ ಪುರಾತನ ಟೆರೇಸಸ್ ಮೇಲೆ ಬೆಳೆ ಬೆಳೆದವರೂ ಇದ್ದರು. ವಿಷದ ಹಾವುಗಳ ವಿಪರೀತದ ಕಾಟದಿಂದ ಮತ್ತಷ್ಟು ಬೆಟ್ಟವನ್ನು ಸವರಲು ಹೋಗದೆ ಕೈ ಬಿಟ್ಟಿದ್ದರು. ಇಲ್ಲಿ ಈ ಬೆಟ್ಟದಲ್ಲಿ ತಮ್ಮ ಪೂರ್ವಜರ ಭವ್ಯ ಬಗರಿಯ ಭಗ್ನಾವಶೇಷಗಳು ದಟ್ಟ ಕಾಡಿನಡಿಯಲ್ಲಿ ಅಡಗಿರುವುದು ಅವರಿಗೆ ತಿಳಿದಿತ್ತು.
ಹಿರಿಮ್ ಬಿಂಗಮ್ 1875ರಲ್ಲಿ ಹುಟ್ಟಿದ್ದ. 1911ರಲ್ಲಿ ಬಿಂಗಮ್ ಇನ್ಕಾಗಳ ಕಳೆದು ಹೋದ ನಗರಿ `ವಿಲ್ಕಬಾಂಬವನ್ನು ಹುಡುಕಿ ಹೊರಟಿದ್ದ. ಬಿಂಗಮಗೆ ಸ್ಥಳಿಯರು ಎದುರಿಗಿನ ಬೆಟ್ಟದ ದಟ್ಟ ಕಾಡು ಪದರುಗಳ ಒಳಗೆ ಇನ್ಕಾಗಳ ಪುರಾತನ ನಗರವಿದೆ ಎಂದು ತಿಳಿಸಿದ್ದರು. ಸ್ಥಳಿಯ ರೈತ ಮೆಲ್ಷಿಯರ್ ಆರ್ತಿಗಾ ಎಂಬಾತ ಬಿಂಗಮನನ್ನು ಇಲ್ಲಿಗೆ ಕರೆತಂದು, ಒಂದಿಷ್ಟು ಜಾಗವನ್ನು ಸವರಿ ತೋರಿಸಿದ್ದ. ಏನನ್ನೋ ಹುಡುಕಿ ಬಂದ ಹಿರಂಮಗೆ ಅನಾಯಾಸವಾಗಿ ಈ ಹಳೆಯ ಬೆಟ್ಟದಲ್ಲಿ ನಶಿಸಿ ಹೋದ ನಾಗರಿಕತೆಯ ಭವ್ಯ ಪಳಿಯುಳಿಕೆಗಳು ದಕ್ಕಿದವು. ದಟ್ಟ ಪೊದೆ, ಮೆಳೆ ಬೆಳೆದು ಶಿಥಿಲಾವಸ್ಥೆಯಲ್ಲಿ ನಗರದ ಅವಶೇಷಗಳೆಲ್ಲ ಮುಚ್ಚಿ ಹೋಗಿದ್ದವು. ಸ್ಥಳೀಯರ ಸಹಾಯದಿಂದ ಪೊದೆ ಸವರಿ ಬಿಂಗಮ್ ನೋಡಿದಾಗ, ಮೊದಲು ಕಂಡ ಜಾಗ `ಕೇಂದ್ರ ಪ್ಲಾಜಾ. ಬಿಂಗಮನ ಆಸಕ್ತಿ ಕೆರಳಿತು. ಅಮೆರಿಕಾಗೆ ಹಿಂದಿರುಗಿದ. `ನ್ಯಾಷನಲ್ ಜಿಯಾಗ್ರಫಿ ಹಾಗೂ ತನ್ನ `ಯೇಲ್ ವಿಶ್ವವಿದ್ಯಾಲಯದ ಆರ್ಥಿಕ ನೆರವು ಪಡೆದುಕೊಂಡು ಹಿಂದಿರುಗಿದ. 1912ರಲ್ಲಿ, ಈ ಸ್ಥಳವನ್ನು ಉತ್ಖನನದ ಮೂಲಕ ಹೊರತೆಗೆದು, ಪುನರುಜ್ಜೀವನಗೊಳಿಸಲಾಯಿತು. ಅರ್ಧ ನಗರ ತೆರೆದು ನಿಂತಿದೆ. ಕೆಳಗಿನ ಅರ್ಧ ಭಾಗ ಈಗಲೂ ದಟ್ಟ ಕಾಡಿನಡಿ ಮುಚ್ಚಿ ಹೋಗಿದೆ.

ಇತ್ತೀಚಿನ ಅಧ್ಯಯನಗಳು ಇದು ಸೂರ್ಯನ ಸಂಕ್ರಮಣವನ್ನು ಅವಲೋಕಿಸಿದ ಖಗೋಳ ವೀಕ್ಷಣಾಲಯ ಎನ್ನುತ್ತವೆ. ಇನ್ಕಾಗಳು ಪ್ರಕೃತಿಯ ಪೂಜಕರು. ಪ್ರಕೃತಿಯ ಪ್ರತಿಯೊಂದನ್ನೂ ಪೂಜಿಸಿದರು. ಗಾಳಿ, ನೀರು, ನೆಲ, ಭೂಮಿ, ಮಿಂಚು, ಕಾಮನ ಬಿಲ್ಲು, ಬೆಟ್ಟ ಗುಡ್ಡ, ಕಲ್ಲು ಪ್ರಾಣಿ ಪಕ್ಷಿ ಎಲ್ಲವನ್ನೂ, ಇವೆಲ್ಲದರಲ್ಲೂ `ಹೊಕಾ ಅಂದರೆ `ಆಧ್ಯಾತ್ಮ ಶಕ್ತಿ ಇದೆ ಎಂದು ನಂಬಿದವರು. ಮಾಚುಪಿಚು ಇನ್ಕಾಗಳ `ಆಧ್ಯಾತ್ಮ ನಗರಿ' ಎಂಬ ವಾದವೂ ಮುಂದುವರೆದಿದೆ.
ಇಲ್ಲಿ ಉತ್ಖನನದ ಮೂಲಕ ಹೊರತೆಗೆದ ಮಾನವ ಪಳಿಯುಳಿಕೆಗಳಲ್ಲಿ ಶೇಕಡ 75ರಷ್ಟು ಹೆಂಗಸರದು ಎಂದು ಸಾರಿದ್ದರು. ಮಾಚುಪಿಚುವನ್ನು `ಸೂರ್ಯದೇವರ ಕನ್ಯೆಯರ ಆಶ್ರಯತಾಣ ಎಂಬ ನಂಬುಗೆ ಮೂಡಿತ್ತು. ಆದರೆ ಈ ಅಸ್ಥಿಪಂಜರಗಳನ್ನು 1980ರ ದಶಕದಲ್ಲಿ ಆಧುನಿಕ ತಾಂತ್ರಿಕತೆಯ ಮೂಲಕ ಪರೀಕ್ಷಿಸಿದಾಗ, ಇಲ್ಲಿ ಗಂಡು ಹೆಣ್ಣು ಸಮಾನವಾಗಿರುವುದು ಕಂಡುಬಂದಿತು. ಮಾಚುಪಿಚು ಯಾರ ಆಕ್ರಮಣಕ್ಕೆ ಗುರಿಯಾಗದಿದ್ದರೂ, ಅದನ್ನು ಇನ್ಕಾಗಳು ತಾವೇ ತೊರೆದರು. ಕಾರಣ ಇಂದಿಗೂ ತಿಳಿಯದು.

ಅಮೆಜಾನ್ ಮಹಾನದಿ -
	ಅಮೆಜಾನ್ ನದಿಯನ್ನು ಇನ್ಕಾಗಳು `ಅಮರು ಮಾಯು ಅಂದರೆ ಮಹಾ ಸರ್ಪಮಾತೆ ಎಂದು ಕರೆದಿದ್ದರು. ಅಮೆಜಾನ್ ನದಿ ಹಾವಿನಂತೆ ಬಾಗಿ ತಿರುವಿ ಹರಿಯುತ್ತದೆ.

	ಅಮೆಜಾನ್ ಬಲು ವಿಶಾಲವಾದ ನದಿ. ಅದೆಷ್ಟೋ ನದಿಗಳು ಈ ಮಹಾನದಿಯಲ್ಲಿ ಲೀನವಾಗಿ, ಅಮೆಜಾನ್ ಹಿಗ್ಗಿ ಅಗಲಗೊಂಡಿದೆ. ಅಮೆಜಾನ್ ಪೆರುವಿನಲ್ಲಿ ಹುಟ್ಟಿ 6,280 ಕಿಲೋಮೀಟರಿನ ಅತಿ ದೀರ್ಘ ಹಾದಿಯನ್ನು ಭೋರ್ಗರೆದು ಸವೆಸಿ ಬ್ರಸಿಲಿನಲ್ಲಿ ಸಮುದ್ರ ಸೇರುತ್ತದೆ. ಆಫ್ರಿಕಾದ ಜೀವನದಿ ನೈಲ್‍ಅನ್ನು ಬಿಟ್ಟರೆ, ಜಗತ್ತಿನ ಅತಿ ಉದ್ದನೆಯ ನದಿ ಅಮೆಜಾನ್. ಆದರೆ ಅಮೆಜಾನಿನಲ್ಲಿ ಹರಿಯುವಷ್ಟು ನೀರಿನ ಪ್ರಮಾಣ ನೈಲ್‍ನಲ್ಲಿಲ್ಲ. ಜಗತ್ತಿನ ಎಲ್ಲ ನದಿಗಳೂ ಸಮುದ್ರಕ್ಕೆ ಸುರಿಯುವ ನೀರಿನ ಶೇಕಡ 20ರಷ್ಟು ಭಾಗ ಅಮೆಜಾನ್ ಒಂದೇ ಸುರಿಯುತ್ತದೆ. ಅಮೆಜಾನ್ ನದಿ ಪ್ರತಿದಿನ ಎಂಬತ್ತು ಟ್ರಿಲಿಯನ್ ಗ್ಯಾಲನ್ ನೀರನ್ನು ಸಮುದ್ರಕ್ಕೆ ಸುರಿಯುತ್ತದೆ! ಸಮುದ್ರ ಸೇರುವಲ್ಲಿ ಅಮೆಜಾನಿನ ಅಗಲ ಎಂಬತ್ತು ಮೈಲಿಗಳು! ಈ ನದಿಗೆ ಸಾವಿರಾರು ಉಪನದಿಗಳಿವೆ. ಸಾವಿರಾರು ಮೈಲಿ ಹರಿದು ಸೇರುವ ದೊಡ್ಡ ಉಪನದಿಗಳೂ ಇವೆ.

	ಮಳೆಗಾಲದಲ್ಲಂತೂ ಅಮೆಜಾನ್ ಮತ್ತಷ್ಟು ಅಗಲವಾಗುತ್ತದೆ, ಮತ್ತಷ್ಟು ರಭಸದಿಂದ ಹರಿಯುತ್ತದೆ. ಅಮೆಜಾನ್ ಸಮುದ್ರವನ್ನು ಸೇರಿದೆಡೆ, ಸಮುದ್ರವನ್ನೇ ನೂಕಿ ಸಾಗುತ್ತದೆ. ಹಾಗೆಂದೇ, ನೂರಾರು ಮೈಲಿಗಳಷ್ಟು ಒಳಗೂ ಸಮುದ್ರದಲ್ಲಿ ಸಿಹಿನೀರು! ಪ್ರವಾಹದ ಸಮಯದಲ್ಲಿ ಅಮೆಜಾನ್ ಮತ್ತಷ್ಟು ಅಗಲವಾಗಿ ನದಿಯ ನಡುವಿನ ದ್ವೀಪಗಳನ್ನೆಲ್ಲ ಆವರಿಸಿ ನಿಲ್ಲುತ್ತದೆ. ಇಕ್ಕೆಲದ ದಟ್ಟ ಕಾಡುಗಳನ್ನು ಕೊಚ್ಚಿ ಹೆಮ್ಮರಗಳನ್ನೂ ಕಡ್ಡಿಕಸದಂತೆ ತೇಲಿ ಬಿಡುತ್ತದೆ. ಆದರೆ ಅಮೆಜಾನ್ ಈ ರೀತಿ ಆವರಿಸಿ ಇಳಿಯುವಾಗ ಬಿಟ್ಟು ಬರುವ ಮಡ್ಡಿ, ಚರಟ ಈ ನೆಲವನ್ನು ಅತ್ಯಂತ ಫಲವತ್ತಾಗಿಸಿದೆ.
ಅಮೆಜಾನ್ ಇಷ್ಟು ದೊಡ್ಡದಾಗಲು ಕಾರಣ, ಅಮೆಜಾನ್ ನದಿ ಸರಿಯಾಗಿ ಭೂಮಧ್ಯ ರೇಖೆಯ ಬಳಿ ಇದೆ. ಈ ಭೂಮಿಯ ನಡುಪಟ್ಟಿಯ ಬಳಿ ಉಷ್ಣವಲಯದ ಬಿಸುಪಾದ ತಾಣದಲ್ಲಿ ಪ್ರತಿ ವರ್ಷ 400 ಅಂಗುಲ ಮಳೆಯಾಗುತ್ತದೆ. ಬಹಳಷ್ಟು ಮಳೆಯ ನೀರು ಅಮೆಜಾನ್ ನದಿಗೆ `ನೀರು ಬಸೆಯುವ ಜಾಗದಲ್ಲಿ ಬಂದು ಬೀಳುತ್ತದೆ. ದಕ್ಷಿಣ ಅಮೆರಿಕ ಖಂಡದ ಉತ್ತರದ ಅರ್ಧ ಭಾಗವನ್ನು ಒಂದು ಬಟ್ಟಲಿನಂತೆ ಸೇರುತ್ತದೆ. ಅಮೆಜಾನ್ ಕಾಡುಗಳಲ್ಲಿ ಬೀಳುವ ಮಳೆಯ ಅಗಾಧ ಮೊತ್ತ ಮತ್ತು ಸುತ್ತಲಿನ ನೆಲದ ಇಳಿಜಾರು ಇವೆಲ್ಲವೂ ಜೊತೆಗೂಡಿ ಅಮೆಜಾನಿನಂತಹ ಮಹಾನದಿಯನ್ನು ಸೃಷ್ಟಿಸಿವೆ.
ಅಮೆಜಾನ್ ಮಳೆಕಾಡುಗಳ ಜೀವ ಜಗತ್ತು

	ಅಮೆಜಾನ್ ಮಳೆಕಾಡುಗಳಲ್ಲಿ 300 ಬಗೆಯ ಸಸ್ತನಿಗಳಿವೆ. ಸಾವಿರಾರು ಬಗೆಯ ಮೀನುಗಳಿಗೆ, ಲಕ್ಷಾಂತರ ಬಗೆಯ ಗಿಡ ಮರಗಳಿಗೆ ಅಮೆಜಾನ್ ನೆಲೆಯಾಗಿದೆ. ಇಲ್ಲಿ ಅದೆಷ್ಟು ಬಗೆಯ ಕ್ರಿಮಿ ಕೀಟಗಳಿವೆ ಎಂದರೆ, ಅವೆಲ್ಲವನ್ನೂ ಸಂಪೂರ್ಣವಾಗಿ ದಾಖಲು ಮಾಡಲು ಸಾಧ್ಯವಾಗದೆ ಹೋಗಬಹುದು.
ಅಮೆಜಾನ್ ನದಿಯ ಗುಲಾಬಿ ಬಣ್ಣದ ಡಾಲ್ಫಿನಗಳು

	ಅಮೆಜಾನ್ ನದಿಯಲ್ಲಿ ಗುಲಾಬಿ ಬಣ್ಣದ ಡಾಲ್ಫಿನಗಳಿವೆ. `ಇನಿಯ ಎಂದು ಕರೆಯುವ ಈ ಡಾಲ್ಫಿನಗಳು ಅವನತಿಯ ಅಂಚಿನಲ್ಲಿವೆ. ಇವು ಇತರೆ ಡಾಲ್ಫಿನಗಳಿಗಿಂತ ಅನೇಕ ರೀತಿಯಲ್ಲಿ ವಿಭಿನ್ನವಾಗಿವೆ. ಇವು ಬಲು ನಿಧಾನವಾಗಿ ಚಲಿಸುತ್ತವೆ, ಇವುಗಳಿಗೆ ನೀರಿನಲ್ಲಿ ಹಾಯ್ದು ವೇಗವಾಗಿ ಹೋಗಲು ಬಾಲದಲ್ಲಿ ಈಜುರೆಕ್ಕೆಗಳಿಲ್ಲ. ಇವುಗಳ ಮೂತಿಯಲ್ಲಿ, ಅವುಗಳ ವಯಸ್ಸನ್ನು ಅವಲಂಬಿಸಿ, ನೂರರಿಂದ ಇನ್ನೂರು ಹಲ್ಲುಗಳಿರುತ್ತವೆ! ಈ `ಇನಿಯ ತನ್ನ ಕುತ್ತಿಗೆಯನ್ನು ಎಡಕ್ಕೂ ಬಲಕ್ಕೂ 180 ಡಿಗ್ರಿಯಷ್ಟು ತಿರುಗಿಸಬಲ್ಲದು. ಅಮೆಜಾನಿನ ಪ್ರವಾಹ ತುಂಬಿದ ಕಾಡುಗಳಲ್ಲಿ, ಹೆಚ್ಚು ಆಳವಿಲ್ಲದ ಉಪನದಿಗಳ ನೀರಿನಲ್ಲಿ ಬೇಟೆಯಾಡಲು, `ಎತ್ತ ಬೇಕಾದರೂ ತಿರುಗಬಲ್ಲ ಕತ್ತು ಬಹು ಉಪಯೋಗಿ. ಈ ಇನಿಯಾಗಳು ಏಕಾಂಗಿ ಪ್ರಾಣಿಗಳು, ಗುಂಪು ಗುಂಪಾಗಿ ಚಲಿಸುವವಲ್ಲ. ಮರಿ ಒಂದಿಷ್ಟು ದೊಡ್ಡದಾದೊಡನೆ ತಾನೂ ಏಕಾಂಗಿಯಾಗಿ ಅಲೆದಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಇನಿಯಾಗಳಿಗೆ ಪ್ರಕೃತಿದತ್ತ ವೈರಿಗಳಾರೂ ಇಲ್ಲದೆ ಇರುವುದು. ಗುಂಪಿನ ಸಂರಕ್ಷಣೆಯ ಅವಶ್ಯಕತೆ ಇವಕ್ಕಿಲ್ಲ. ಆದರೆ ಇಂದು ಇನಿಯಾಗಳ ಅತಿ ದೊಡ್ಡ ವೈರಿ ಮನುಷ್ಯ ಮತ್ತು ಮನುಷ್ಯನ ಅತಿಯಾಸೆ. ಅಮೆಜಾನ್ ಮಳೆಕಾಡಿನ ನಾಶ ಈ ಡಾಲ್ಫಿನಗಳ ಬದುಕನ್ನು ನೇರವಾಗಿ ತಟ್ಟಿದೆ. ಈ ಇನಿಯಾಗಳು ಅಮೆಜಾನ್ ನದಿಯಲ್ಲದೆ ಬೇರೆಲ್ಲೂ ಇಲ್ಲ. ಒಂದೇ ಒಂದು ಇನಿಯಾ ಉತ್ತರ ಅಮೆರಿಕದ ಪಿಟ್ಸ್‍ಬರ್ಗ್ ಮೃಗಾಲಯದಲ್ಲಿದೆ.

ಅನಕೊಂಡಾ

	ಅನಕೊಂಡಾಗಳು ಬೋವಾ ಕನಸ್ಟ್ರಿಕ್ಟರ್ ಕುಟುಂಬಕ್ಕೆ ಸೇರಿದ ಹಾವುಗಳು. ಇವು ತಮ್ಮ ಬೇಟೆಯನ್ನು ಕಚ್ಚಿ ಕೊಲ್ಲುವುದಿಲ್ಲ, ಅವುಗಳ ಸುತ್ತ ಸುತ್ತಿಕೊಂಡು ಗಟ್ಟಿಯಾಗಿ ಬಿಗಿದುಕೊಂಡು ಉಸಿರುಕಟ್ಟಿಸಿ ಸಾಯಿಸುತ್ತವೆ. ಇಡಿ ಇಡಿಯಾಗಿ ನುಂಗುತ್ತವೆ. ಅನಕೊಂಡಗಳು ಒಮ್ಮೆಗೆ 60-70 ಮರಿಗಳನ್ನು ಹಾಕುತ್ತವೆ. ಅನಕೊಂಡಗಳು ಹಸಿದಾಗ, ಸುರುಳಿ ಬಿಚ್ಚಿಕೊಂಡು, ನೀರಿನಲ್ಲಿ ಕೇವಲ ಕಣ್ಣುಗಳನ್ನಷ್ಟೆ ಹೊರಗಿಟ್ಟುಕೊಂಡು ತಮ್ಮ ಬೇಟೆಗೆ ಕಾಯುತ್ತವೆ. ನೀರು ಕುಡಿಯಲು ಬರುವ ಪ್ರಾಣಿಗಳನ್ನಿರಲಿ, ಮನುಷ್ಯರನ್ನೂ ನುಂಗಬಲ್ಲದು ಈ ಅಗಾಧ ಪ್ರಮಾಣದ ಹಾವು.

ಪಿರಾನಾ ಮೀನು

	ಅಮೆಜಾನ್ ಜಗತ್ತಿನ ಅತ್ಯಂತ ಭಯಂಕರ ಮೀನು-ಪಿರಾನಾ ಮೀನು. ನೋಡಲು ಸಣ್ಣ ಮೀನು, ಹೆಚ್ಚೆಂದರೆ 50-60 ಸೆಂಟಿಮೀಟರ್ ಉದ್ದ, ಚಪ್ಪಟೆಯಾಕಾರ. ಆದರೆ ಇವು ಒಂಟೊಂಟಿ ತಿರುಗುವ ಮೀನುಗಳಲ್ಲ. ಗುಂಪು ಗುಂಪಾಗಿ ತಿರುಗುವ, ಜೊತೆಯಲ್ಲಿ ಬೇಟೆಯಾಡುವ ಪಿರಾನಗಳು ಮನುಷ್ಯನಿರಲಿ, ಎಮ್ಮೆ ಹಸುವಿನಂತಹ ಪ್ರಾಣಿಯಿರಲಿ, ಕ್ಷಣದಲ್ಲಿ ಮಾಂಸವನ್ನು ಕೆರೆದು ತಿಂದು ಮೂಳೆಗಳನ್ನು ಉಳಿಸುತ್ತವೆ. ಪಿರಾನಾಗಳು ಬಲು ಹೊಟ್ಟೆಬಾಕ ಪ್ರಾಣಿಗಳು. ಇವಕ್ಕೆ ಅತಿ ಹರಿತವಾದ ಹಲ್ಲುಗಳಿವೆ. ಹಾಗೆಂದೇ, ಕ್ಷಣದಲ್ಲಿ ಮಾಂಸ ಹಿಸಿದು ಈ ಮೀನುಗಳು ಅಸ್ತಿಪಂಜರವನ್ನು ಉಳಿಸುತ್ತವೆ.

ವಿಕ್ಟೋರಿಯ ಅಮೆಜಾನಿಕಾ

ಅಮೆಜಾನ್ ಕಾಡುಗಳ ವಾಟರ್ ಲಿಲಿ ಬಹಳ ಪ್ರಸಿದ್ಧವಾದದ್ದು. ಅಮೆಜಾನ್ ಪ್ರದೇಶದಲ್ಲಿ ಅಂತರಗಂಗೆಯ ಕಳೆ ಬೆಳೆದು, ವಾಟರ್ ಲಿಲಿ ಇಂದು ಬಹಳಷ್ಟು ನಾಶವಾಗಿದೆ. ವಾಟರ್ ಲಿಲಿಗೆ ಸ್ವಚ್ಛವಾದ ನೀರು ಬೇಕು. `ವಾಟರ್ ಲಿಲಿ ಎಂದು ಕರೆಯುವ ಈ ತಾವರೆ ಗಿಡದ ಎಲೆಗಳು ನೀರಿನ ಮೇಲೆ ತೇಲುವ ದೈತ್ಯತಟ್ಟೆಗಳಂತೆ ಕಾಣುತ್ತವೆ. ಒಂದೊಂದು ಎಲೆಯೂ ಒಂದೂವರೆ-ಎರಡು ಮೀಟರ್ ವ್ಯಾಸ ಇರುತ್ತವೆ. ದಪ್ಪವಾದ ಎಲೆಯ ಕೆಳ ಭಾಗದಲ್ಲಿ ಮುಳ್ಳುಗಳಿರುತ್ತವೆ. ಈ ತಾವರೆ ಗಿಡಕ್ಕೆ `ವಿಕ್ಟೋರಿಯಾ ಅಮೆಜಾನಿಕ ಎಂದು ಹೆಸರು. 1838ರಲ್ಲಿ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಡಾ. ಲಿಂಗ್ಲೆ ಇದನ್ನು ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ ಈ ಹೆಸರಿಟ್ಟು ಕರೆದ. ಇದಕ್ಕೆ ಬಹಳಷ್ಟು ಬಿಸಿಲು ಬೇಕು. ಹೂಗಳು ರಾತ್ರಿ ಅರಳುತ್ತವೆ. ಈ ಹೂವಿನ ದಳಗಳೆಲ್ಲ ಉದುರಿದ ಮೇಲೆ ಬೆರ್ರಿಯಂತಹ ಕಾಯಿ ಉಳಿಯುತ್ತದೆ. ಈ ಬೀಜದ ತಿರುಳಿನಿಂದ ಮೆದುವಾದ ಹಿಟ್ಟು ತಯಾರಿಸಬಹುದು. ಇದನ್ನು ಸ್ಥಳೀಯರು `ನೀರಿನ ಜೋಳ ಎನ್ನತ್ತಾರೆ. ಲಂಡನ್ನಿನ ಕ್ಯೂ ಗಾರ್ಡನನಲ್ಲಿ ಹಾಗೂ ಕೋಲ್ಕತ್ತಾದ ಬೊಟಾನಿಕಲ್ ಗಾರ್ಡನನಲ್ಲೂ ಇದನ್ನು ಬೆಳೆಸಿದ್ದಾರೆ. ಈ ದೈತ್ಯ ಎಲೆಗಳು ಸಣ್ಣ ಮಗುವಿನ ಭಾರವನ್ನು ಹೊರಬಲ್ಲವು.							
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ